ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು (ಮಂಗಳವಾರ) ದೆಹಲಿ ನಾರ್ತ್ ಬ್ಲಾಕ್ನಲ್ಲಿ ನಡೆದ ಹಲ್ವಾ ಸಮಾರಂಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಭಾಗಿಯಾದರು.
ಹಲ್ವಾ ಸಮಾರಂಭವು ಸಂಸತ್ತಿನಲ್ಲಿ ಮಂಡನೆಗೆ ಮುಂಚಿತವಾಗಿ ಎಲ್ಲಾ ಬಜೆಟ್ ದಾಖಲೆಗಳನ್ನು ಮುದ್ರಿಸುವ ಪ್ರಕ್ರಿಯೆಯನ್ನು ಸೂಚಿಸುತ್ತದೆ.
ಬಜೆಟ್ ತಯಾರಿಕೆಯ ಲಾಕ್-ಇನ್ ಪ್ರಕ್ರಿಯೆಯು ಪ್ರಾರಂಭವಾಗುವ ಮೊದಲು ಸಾಂಪ್ರದಾಯಿಕ ಹಲ್ವಾ ಸಮಾರಂಭವನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ನಾರ್ತ್ ಬ್ಲಾಕ್ನಲ್ಲಿರುವ ದೊಡ್ಡ ‘ಕಡಾಯಿ’ ನಲ್ಲಿ ಹಲ್ವಾ ತಯಾರಿಸಲಾಗುತ್ತದೆ. ಹಣಕಾಸು ಸಚಿವರು ಸಾಮಾನ್ಯವಾಗಿ ಬಜೆಟ್ ತಯಾರಿಕೆಯ ಪ್ರಕ್ರಿಯೆಯಲ್ಲಿ ತೊಡಗಿರುವ ಎಲ್ಲರಿಗೂ ಹಲ್ವಾವನ್ನು ಬಡಿಸುತ್ತಾರೆ. ಈ ಸಂಪ್ರದಾಯವು ಎಲ್ಲಾ ಹಣಕಾಸು ಸಚಿವಾಲಯದ ಅಧಿಕಾರಿಗಳ ಕಠಿಣ ಪರಿಶ್ರಮವನ್ನು ಗುರುತಿಸುವ ಮಾರ್ಗವಾಗಿದೆ.
ಹಲ್ವಾ ಸಮಾರಂಭವು ಮಹತ್ವದ ಘಟನೆಯಾಗಿದೆ. ಬಜೆಟ್ ಮಂಡನೆ ಆಗುವವರೆಗೂ ಇದರಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಯನ್ನೂ ಪ್ರತ್ಯೇಕವಾಗಿ ಇಡಲಾಗುತ್ತದೆ. ಬಜೆಟ್ ಮಂಡನೆ ಆಗುವವರೆಗೂ ಇವರಿಗೆ ಹೊರಜಗತ್ತಿನ ಸಂಪರ್ಕವೇ ಇರುವುದಿಲ್ಲ. ಗುಪ್ತಚರರ ಕಣ್ಗಾವಲು ಸದಾ ಇರುತ್ತದೆ. ತುರ್ತು ಕರೆಗೆ ಮಾತ್ರ ಇವರು ಸ್ಪಂದಿಸಬಹುದು. ಇಲ್ಲಿ ಪ್ರಬಲ ಸೈಬರ್ ಸೆಕ್ಯೂರಿಟಿ ವ್ಯವಸ್ಥೆ ಇರುತ್ತದೆ. ಹಣಕಾಸು ಸಚಿವರು ಮಾತ್ರವೇ ಇವರಿರುವ ಸ್ಥಳಕ್ಕೆ ಹೋಗಿ ಬರಬಹುದು. ಅವರು ಹೋದರೂ ಅಲ್ಲಿಂದ ಮೊಬೈಲ್ ಫೋನ್ ಬಳಸಲು ನಿರ್ಬಂಧ ಇರುತ್ತದೆ.
ಸಂಸತ್ತಿನ ಬಜೆಟ್ ಅಧಿವೇಶನ ಜುಲೈ 22 ರಂದು ಪ್ರಾರಂಭವಾಗಲಿದ್ದು, ವೇಳಾಪಟ್ಟಿಯ ಪ್ರಕಾರ ಆಗಸ್ಟ್ 12 ರಂದು ಕೊನೆಗೊಳ್ಳಲಿದೆ.