ಹೊಸ ದಿಗಂತ ಡಿಜಿಟಿಲ್ ಡೆಸ್ಕ್:
ದೇಶಾದ್ಯಂತ ಕೃಷಿ ಜಿಲ್ಲೆಗಳ ಅಭಿವೃದ್ಧಿಯ ಗುರಿಯನ್ನು ಹೊಂದಿರುವ ವಾರ್ಷಿಕ 24,000 ಕೋಟಿ ರೂ.ಗಳ ವೆಚ್ಚದ ಮೂರು ಪ್ರಮುಖ ಉಪಕ್ರಮಗಳಾದ ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ (PMDDKY) ಗೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕಳೆದ ಬಾರಿಯ ಬಜೆಟ್ನಲ್ಲಿ (2025-26) ನಿರ್ಮಲಾ ಸೀತಾರಾಮನ್ ಅವರು ಪ್ರಧಾನಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯನ್ನು ಪ್ರಕಟಿಸಿದ್ದರು. ವಿವಿಧ 11 ಕೇಂದ್ರೀಯ ಸಚಿವಾಲಯಗಳ 36 ವಿವಿಧ ಸ್ಕೀಮ್ಗಳನ್ನು ಬಳಸಿ 100 ಕೃಷಿ ಕೇಂದ್ರಿತ ಜಿಲ್ಲೆಗಳನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶ. ಕಡಿಮೆ ಕೃಷಿ ಉತ್ಪನ್ನತೆ ಇರುವ ಜಿಲ್ಲೆಗಳನ್ನು ಆಯ್ದುಕೊಳ್ಳಲಾಗುತ್ತದೆ. ವರ್ಷಕ್ಕೆ 24,000 ಕೋಟಿ ರೂ ಧನಸಹಾಯ ಒದಗಿಸಲಾಗುತ್ತದೆ. ಹೀಗೆ ಆರು ವರ್ಷ ಇದನ್ನು ಮುಂದುವರಿಸಬಹುದು.
ಕೇಂದ್ರ ಸಂಪುಟವು ದೇಶದಲ್ಲಿ ಕೃಷಿ ಕ್ಷೇತ್ರವನ್ನು ಬಲಪಡಿಸಲು ಹಾಗೂ ನವೀಕರಣ ಇಂಧನ ಉತ್ಪಾದನಾ ಕ್ಷೇತ್ರವನ್ನು (Renewable energy sector) ಉತ್ತೇಜಿಸಲು ಒಟ್ಟು ಮೂರು ಉಪಕ್ರಮಗಳಿಗೆ ವಾರ್ಷಿಕ 50,000 ಕೋಟಿ ರೂ ನಿಯೋಜನೆಗೆ ಕೇಂದ್ರ ಸಂಪುಟ (union cabinet) ಇಂದು ಒಪ್ಪಿಗೆ ನೀಡಿದೆ. ಪಿಎಂ ಧನ್ ಧಾನ್ಯ ಕೃಷಿ ಯೋಜನೆ: ವರ್ಷಕ್ಕೆ 24,000 ಕೋಟಿ ರೂ ನಿಯೋಜನೆ, ಎನ್ಟಿಪಿಸಿ ಗ್ರೀನ್ ಎನರ್ಜಿ: ಈಕ್ವಿಟಿ ಖರೀದಿಸುವ ಮೂಲಕ 20,000 ಕೋಟಿ ರೂ ಹೂಡಿಕೆ , ಎನ್ಐಆರ್ಎಲ್: 7,000 ಕೋಟಿ ರೂ ಫಂಡಿಂಗ್.
ಎನ್ಟಿಪಿಸಿ ಗ್ರೀನ್ ಎನರ್ಜಿ
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ನ ಅಂಗಸಂಸ್ಥೆಯಅದ ಎನ್ಟಿಪಿಸಿ ಗ್ರೀನ್ ಎನರ್ಜಿಯಲ್ಲಿ ಸರ್ಕಾರ 20,000 ಕೋಟಿ ರೂ ಈಕ್ವಿಟಿ ಬಂಡವಾಳ (Equity infusion) ನೀಡಲಿದೆ. ಸೌರಶಕ್ತಿ, ವಾಯುಶಕ್ತಿ, ಗ್ರೀನ್ ಹೈಡ್ರೋಜನ್ ಇತ್ಯಾದಿ ನವೀಕರಣ ಇಂಧನ ಯೋಜನೆಗಳಲ್ಲಿ ಹೂಡಿಕೆಗಳನ್ನು ಹೆಚ್ಚಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. 2032ರಷ್ಟರಲ್ಲಿ ಗ್ರೀನ್ ಎನರ್ಜಿ ಸಾಮರ್ಥ್ಯವನ್ನು 60 ಗಿ.ವ್ಯಾಟ್ಗೆ ಹೆಚ್ಚಿಸುವ ಗುರಿ ಇದೆ.
ಎನ್ಎಲ್ಸಿ ಇಂಡಿಯಾ ರಿನಿವಬಲ್ಸ್ಗೆ
ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಶನ್ನ ಅಂಗಸಂಸ್ಥೆಯಾದ ಎನ್ಐಆರ್ಎಲ್ ಕೂಡ ನವೀಕರಣ ವಿದ್ಯುತ್ ಉತ್ಪಾದನಾ ಕಾರ್ಯ ಮಾಡುತ್ತಿದೆ. ಇದಕ್ಕೆ ಪುಷ್ಟಿ ಕೊಡಲು ಸರ್ಕಾರ 7,000 ಕೋಟಿ ರೂ ಫಂಡಿಂಗ್ ಕೊಡುತ್ತಿದೆ. ನೇಯ್ವೇಲಿ ಲಿಗ್ನೈಟ್ ಕಾರ್ಪೊರೇಶನ್ನಿಂದ 6,263 ಕೋಟಿ ರೂ ಮೌಲ್ಯದ ನವೀಕರಣ ಇಂಧನ ಆಸ್ತಿಗಳನ್ನು ವರ್ಗಾಯಿಸಲಾಗುತ್ತದೆ. 700 ಕೋಟಿ ರೂ ಹಣವನ್ನು ವಿವಿಧ ಯೋಜನೆಗಳ ಜಾರಿಗೆ ಬಳಸಲು ಅವಕಾಶ ಕೊಡಲಾಗುತ್ತದೆ.
ಸದ್ಯ 1,400 ಮೆ.ವ್ಯಾಟ್ ನವೀಕರಣ ಇಂಧನ ತಯಾರಿಸುತ್ತಿರುವ ಎನ್ಐಆರ್ಎಲ್ 2030ರೊಳಗೆ 10 ಗಿ.ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಗಳಿಸುವ ಗುರಿ ಇಟ್ಟಿದೆ.