ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRQO) ದೆಹಲಿ ಮೂಲದ ಫ್ರೆಂಚ್ ಪತ್ರಕರ್ತೆ ವನೆಸ್ಸಾ ಡೌಗ್ನಾಕ್ ಅವರಿಗೆ ಕೇಂದ್ರ ಸರಕಾರ ನೋಟಿಸ್ ಜಾರಿ ಮಾಡಿಡೆ .
ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಫ್‌ಆರ್‌ಆರ್‌ಒ, ವನೆಸ್ಸಾ ಡೌಗ್ನಾಕ್, ತಮ್ಮ ಪತ್ರಿಕೋದ್ಯಮ ವೃತ್ತಿಯನ್ನು ದುರುದ್ದೇಶಪೂರಿತ ಹಾಗೂ ಭಾರತದ ಬಗ್ಗೆ ನಕಾರಾತ್ಮಕ ಗ್ರಹಿಕೆ ಬರುವಂತೆ ಮಾಡಲು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ. ಅವರ ಪತ್ರಿಕೋದ್ಯಮ ಚಟುವಟಿಕೆಗಳು ದುರುದ್ದೇಶಪೂರಿತ ಮತ್ತು ವಿಮರ್ಶಾತ್ಮಕ ಎನ್ನುವ ರೀತಿಯಲ್ಲಿ ಭಾರತದ ಬಗ್ಗೆ ಪಕ್ಷಪಾತದ ಗ್ರಹಿಕೆಯನ್ನು ಸೃಷ್ಟಿಸುತ್ತವೆ ಎಂದು ವರದಿ ಹೇಳಿದೆ. ಅದರೊಂದಿಗೆ ಅವರ ಚಟುವಟಿಕೆಗಳು ದೇಶದಲ್ಲಿ ಕೆಟ್ಟ ಕಾರ್ಯಕ್ಕೆ ಪ್ರಚೋದಿಸಬಹುದು ಮತ್ತು ಶಾಂತಿಯನ್ನು ಕದಡಬಹುದು ಎಂದು ತಿಳಿಸಿದೆ.
ವನೆಸ್ಸಾ ಡೌಗ್ನಾಕ್ ಫ್ರೆಂಚ್ ಮಾಧ್ಯಮ ವೇದಿಕೆ ಲಾ ಕ್ರೋಯಿಕ್ಸ್ (Le Croix) ನಲ್ಲಿ ಕೆಲಸ ಮಾಡುತ್ತಿದ್ದು, ಸುಮಾರು ಎರಡು ದಶಕಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ಫ್ರೆಂಚ್‌ನಲ್ಲಿ ತಮ್ಮ ಲೇಖನಗಳನ್ನು ಅವರು ಬರೆಯುತ್ತಾರೆ. ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿದ್ದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಭೇಟಿಗೆ ಮುನ್ನ ಈ ಆದೇಶ ಹೊರಬಿದ್ದಿದೆ.
ಭಾರತ ಸರ್ಕಾರದ ಸಂಬಂಧಿತ ಇಲಾಖೆಯಿಂದ ನಾನು ನೋಟಿಸ್ ಸ್ವೀಕರಿಸಿದ್ದೇನೆ ಮತ್ತು ನನ್ನ ಮತ್ತು ನನ್ನ ನಡವಳಿಕೆಯ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳನ್ನು ನಾನು ನಿರಾಕರಿಸುತ್ತೇನೆ ಎಂದು ಡೌಗ್ನಾಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತವು ನನ್ನ ಮನೆ, ನಾನು ಆಳವಾಗಿ ಪ್ರೀತಿಸುವ ಮತ್ತು ಗೌರವಿಸುವ ದೇಶ, ಮತ್ತು ನಾನು ಆರೋಪಿಸಿದಂತೆ ಭಾರತೀಯ ಹಿತಾಸಕ್ತಿಗಳಿಗೆ ಯಾವುದೇ ರೀತಿಯಲ್ಲಿ ಪೂರ್ವಾಗ್ರಹ ಪಡಿಸುವ ಯಾವುದೇ ಕೃತ್ಯಗಳಲ್ಲಿ ತೊಡಗಿಲ್ಲ ಎಂದು ತಿಳಿಸಿದ್ದಾರೆ.
ಇಂಥ ವಿಷಯಗಳೊಂದಿಗೆ ವ್ಯವಹಾರ ನಡೆಸಲು ಕಾನೂನು ಪ್ರಕ್ರಿಯೆ ಇದೆ, ಅದಕ್ಕೆ ನಾನು ಸಹಕರಿಸುತ್ತೇನೆ. ಕಾನೂನು ಪ್ರಕ್ರಿಯೆಯು ನಡೆಯುತ್ತಿರುವುದರಿಂದ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮುಂದೆ ವಿಚಾರಣೆಗಳು ಬಾಕಿಯಿರುವುದರಿಂದ, ಈ ಪ್ರಕ್ರಿಯೆ ನಡೆಯಲು ಎಲ್ಲರೂ ಅನುಮತಿ ನೀಡಬೇಕು ಎಂದು ವಿನಂತಿಸುತ್ತೇನೆ. ಈ ಸಮಯದಲ್ಲಿ ನನ್ನ ಗೌಪ್ಯತೆಯನ್ನು ಎಲ್ಲರೂ ಗೌರವಿಸುತ್ತಾರೆ ಎಂದು ಹೇಳಿದ್ದಾರೆ.