ಹೊಸದಿಗಂತ ಡಿಜಿಟಲ್ ಡೆಸ್ಕ್:
ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗಿರುವ ದೇಶದ ಎರಡನೇ ಅತಿ ಉದ್ದದ ತೂಗುಸೇತುವೆಯನ್ನು ಇಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಲೋಕಾರ್ಪಣೆ ಮಾಡಿದ್ದಾರೆ.
ಇದಕ್ಕೂ ಮುನ್ನ ಸಚಿವ ಗಡ್ಕರಿ ಹೋಮದಲ್ಲಿ ಭಾಗಿಯಾಗಿ, ಶರಾವತಿ ನದಿಗೆ ಬಾಗಿನ ಅರ್ಪಿಸಿದರು. ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಚನ್ನಬಸಪ್ಪ, ಡಿ.ಎಸ್.ಅರುಣ್, ಡಾ.ಧನಂಜಯ್ ಸರ್ಜಿ ಸೇರಿದಂತೆ ಸ್ಥಳೀಯ ಜನರು ಭಾಗವಹಿಸಿದ್ದರು.
ಈ ಸೇತುವೆಯು ಶರಾವತಿ ದ್ವೀಪದ ಜನರ ದಶಕಗಳ ಬೇಡಿಕೆಯಾಗಿತ್ತು. 2010ರಲ್ಲಿ ಪ್ರಾರಂಭವಾದ ನಿರ್ಮಾಣ ಕಾರ್ಯ 2025ರಲ್ಲಿ ಮುಕ್ತಾಯವಾಗಿದೆ. ಸುಮಾರು 423.15 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸೇತುವೆ ನಿರ್ಮಾಣಕ್ಕೆ ಸಾಗರ ಪಟ್ಟಣದಿಂದ ಹೊಸನಗರ ತಾಲೂಕಿನ ಮರಕುಟುಕದ ವರೆಗೆ ಗ್ರಾಮೀಣ ಭಾಗದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿ ಮೊದಲ ಹಂತದಲ್ಲಿ ಸೇತುವೆ ನಿರ್ಮಿಸಲಾಗಿದೆ.
1960ರಲ್ಲಿ ಶರಾವತಿ ನದಿಗೆ ಲಿಂಗನಮಕ್ಕಿ ಬಳಿ ಜಲಾಶಯ ನಿರ್ಮಾಣ ಮಾಡಲಾಯಿತು. ಆಗ ಇಲ್ಲಿನ ನಿವಾಸಿಗಳ ಫಲವತ್ತಾದ ಭೂಮಿಗಳು ಹಿನ್ನೀರಿನಲ್ಲಿ ಮುಳುಗಡೆಯಾದವು. ನಂತರ ಅವರನ್ನು ಅಂದಿನ ಕರ್ನಾಟಕ ವಿದ್ಯುತ್ ನಿಗಮದವರು ರಾತ್ರೋರಾತ್ರಿ ಲಾರಿಯಲ್ಲಿ ತುಂಬಿಕೊಂಡು ಶಿವಮೊಗ್ಗ ತಾಲೂಕು, ಭದ್ರಾವತಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಬಿಟ್ಟು ಹೋಗಿದ್ದರು.
ಶರಾವತಿ ಹಿನ್ನೀರು ಈ ಭಾಗದ ಜನರ ಜೀವನವನ್ನೇ ಹಿಂಡಿ ಹಿಪ್ಪೆ ಮಾಡಿತ್ತು. ಸುತ್ತಲೂ ನೀರಿನಿಂದ ಕೂಡಿದ್ದರಿಂದ ಇಲ್ಲಿನ ಜನ ಹೊರಭಾಗಕ್ಕೆ ಸಂಪರ್ಕ ಕಳೆದುಕೊಳ್ಳಬೇಕಾಯಿತು. ಅನಾರೋಗ್ಯ, ಶಿಕ್ಷಣ ಸೇರಿದಂತೆ ಇತರೆ ಎಲ್ಲಾ ಮೂಲಭೂತ ಸೌಕರ್ಯಗಳಿಂದ ಜನರು ವಂಚಿತರಾಗಿದ್ದರು.