February 10, 2026
Tuesday, February 10, 2026
spot_img

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾದ ಕಾರಜೋಳ: ರೈಲು ನಿಲುಗಡೆ ಕುರಿತು ಮನವಿ

ಹೊಸ ದಿಗಂತ ವರದಿ,ಚಿತ್ರದುರ್ಗ

ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೆಲವೊಂದು ರೈಲ್ವೆ ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆಗೆ ಹಾಗೂ ಕೆಲವೊಂದು ನೂತನ ರೈಲುಗಳ ಓಡಾಟ ಪ್ರಾರಂಭಿಸುವುದು ಹಾಗೂ ರೈಲ್ವೆ ಮೇಲು ಸೇತುವೆ ಹಾಗೂ ಕೆಳಸೇತುವೆಗಳ ನಿರ್ಮಾಣದ ಕುರಿತು ಸಂಸದ ಗೋವಿಂದ ಎಂ. ಕಾರಜೋಳರವರು ನವದೆಹಲಿಯಲ್ಲಿ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.

ಹೊಸದುರ್ಗ ರೋಡ್ ರೈಲ್ವೆ ನಿಲ್ದಾಣದಲ್ಲಿ ವಾಸ್ಕೋಡಗಾಮ-ಯಶವoತಪುರ ಎಕ್ಸ್‌ಪ್ರೆಸ್, ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್, ಚಾಲುಕ್ಯ ಎಕ್ಸ್‌ಪ್ರೆಸ್, ಹೊಳಲ್ಕೆರೆ ರೈಲ್ವೆ ನಿಲ್ದಾಣದಲ್ಲಿ ಸಿದ್ದಗಂಗ ಇಂಟರ್‌ಸಿಟಿ, ವಾಸ್ಕೋಡಗಾಮ, ವಿಶ್ವಮಾನವ, ವಿಜಯಪುರ-ಹಾಸನ-ಮಂಗಳೂರು ಟ್ರೈನುಗಳ ನಿಲುಗಡೆ, ರಾಮಗಿರಿ ರೈಲ್ವೆ ನಿಲ್ದಾಣದಲ್ಲಿ ಸಿದ್ದಗಂಗ ಇಂಟರ್‌ಸಿಟಿ, ವಾಸ್ಕೋಡಗಾಮ, ಕಾರಟಗಿ-ಯಶವಂತಪುರ ಟ್ರೈನುಗಳ ನಿಲುಗಡೆ, ಚಿಕ್ಕಜಾಜೂರಿನಲ್ಲಿ ಕರ್ನಾಟಕ ಸಂಪರ್ಕ ಕ್ರಾಂತಿ, ಚಳ್ಳಕೆರೆ ರೈಲ್ವೆ ನಿಲ್ದಾಣದಲ್ಲಿ ಮೈಸೂರು-ಸಾಯಿನಗರ ಶಿರಡಿ ಟ್ರೈನ್, ಸಿಂಧನೂರು ಎಕ್ಸ್‌ಪ್ರೆಸ್, ಟ್ರೈನುಗಳಿಗೆ ನಿಲುಗಡೆ ಒದಗಿಸುವುದು.

ಕೊರೋನಾ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ಹೊಸಪೇಟೆ-ಬೆಂಗಳೂರು ಟ್ರೈನು, ಶಿವಮೊಗ್ಗ-ಚನ್ನೈ ವಯಾ ಚಿತ್ರದುರ್ಗ, ಬಳ್ಳಾರಿ, ರೇನುಗುಂಟ, ಟ್ರೈನುಗಳನ್ನು ಪುನಃ ಪ್ರಾರಂಭಿಸುವುದು. ಈ ಮೊದಲಿದ್ದ ಹುಬ್ಬಳ್ಳಿ-ಚಿತ್ರದುರ್ಗ ಪ್ಯಾಸೆಂಜರ್ ಟ್ರೈನ್ ಈಗ ಚಿಕ್ಕಜಾಜೂರುವರೆಗೆ ಮಾತ್ರ ಸಂಚರಿಸುತ್ತಿದೆ. ಇದನ್ನು ಚಿತ್ರದುರ್ಗದವರೆಗೆ ವಿಸ್ತರಿಸುವುದು.
ಹೊಸದಾಗಿ ಬೀದರ್ ನಿಂದ ಚಿತ್ರದುರ್ಗ ಮಾರ್ಗವಾಗಿ ಮಂಗಳೂರಿಗೆ ಹಾಗೂ ವಿಜಯಪುರದಿಂದ ಚಿತ್ರದುರ್ಗ ಮಾರ್ಗವಾಗಿ ಮೈಸೂರಿಗೆ ಹಾಗೂ ಶಿವಮೊಗ್ಗದಿಂದ ಚಿತ್ರದುರ್ಗ ಮಾರ್ಗವಾಗಿ ಹೊಸಪೇಟೆಗೆ ನೂತನ ಟ್ರೈನುಗಳ ಓಡಾಟ ಪ್ರಾರಂಭಿಸುವುದು.

ಚಳ್ಳಕೆರೆ ನಗರ ಪರಿಮಿತಿಯಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ೪೫ ಕ್ಕೆ ಮೇಲು ಸೇತುವೆ ನಿರ್ಮಾಣ, ರಾಮಗಿರಿ ಬಳಿ ಲೆವೆಲ್ ಕ್ರಾಸಿಂಗ್ ೭೭-ಎ ಮೇಲು ಸೇತುವೆ ನಿರ್ಮಾಣ, ಬೇಡರೆಡ್ಡಿಹಳ್ಳಿ ಬಳಿ ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿಗೆ ಅಡ್ಡಲಾಗಿ ಮೇಲುಸೇತುವೆ ನಿರ್ಮಾಣ ಸೇರಿದಂತೆ ಚಿತ್ರದುರ್ಗ ನಗರದಲ್ಲಿ ಚಿತ್ರದುರ್ಗ-ದಾವಣಗೆರೆ ಮಾರ್ಗದಲ್ಲಿ ಮುಖ್ಯರಸ್ತೆಯಿಂದ ರೈಲ್ವೆ ಸ್ಟೇಷನ್‌ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವುದು.

ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರೈಲುಗಳ ನಿಲುಗಡೆಗೆ ಮನವಿ ಮಾಡಿಕೊಂಡಿರುವ ಎಲ್ಲಾ ರೈಲು ನಿಲ್ದಾಣಗಳು ಪ್ರಮುಖ ತಾಣಗಳಾಗಿದ್ದು, ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳಾಗಿರುತ್ತವೆ. ಅಲ್ಲದೇ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ನಿಲ್ದಾಣಗಳಾಗಲಿವೆ ಎಂಬುದನ್ನು ಸಚಿವರ ಗಮನಕ್ಕೆ ತರಲಾಗಿದೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಸಾರಿಗೆ ಸೌಲಭ್ಯ ಅಷ್ಟೊಂದು ಸಮಪರ್ಕವಾಗಿಲ್ಲದ ಕಾರಣ ಬಹಳಷ್ಟು ಜನರು ರೈಲ್ವೆಯನ್ನೇ ನಂಬಿಕೊಂಡಿದ್ದಾರೆ. ಹತ್ತಿರದ ನಗರಗಳಿಗೆ ಸಂಪರ್ಕ ಸಾಧಿಸಲು ರೈಲ್ವೆ ಪ್ರಮುಖ ಮಾಧ್ಯಮವಾಗಿದೆ ಎಂಬುದನ್ನು ವಿವರಿಸಲಾಗಿದೆ.

ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರೈಲ್ವೆ ಸಚಿವರು ಈಗಾಗಲೇ ತಾವು ಈ ಹಿಂದೆ ಸಲ್ಲಿಸಿದ್ದ ಮನವಿಯನ್ನು ಕೂಲಂಕುಶವಾಗಿ ಪರಿಶೀಲಿಸಿ ರೈಲುಗಳ ನಿಲುಗಡೆಗಳ ಕುರಿತು ಕಾರ್ಯಸಾಧ್ಯತಾ ವರದಿ ನೀಡಲು ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ತಕ್ಷಣ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !