ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವ ಈ ಹೊತ್ತಿನಲ್ಲಿ, ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಜೀವ ಬೆದರಿಕೆ ಬಂದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಈ ಸಂಬಂಧ, ಪಾಟ್ನಾದ ಸೈಬರ್ ಪೊಲೀಸ್ ಠಾಣೆಯಲ್ಲಿ ಚಿರಾಗ್ ಪಾಸ್ವಾನ್ ಪರವಾಗಿ ಪಕ್ಷದ ವಕ್ತಾರ ರಾಜೇಶ್ ಭಟ್ ಎಫ್‌ಐಆರ್ ದಾಖಲು ಮಾಡಿದ್ದಾರೆ. ‘ಟೈಗರ್ ಮೆರಾಜ್ ಇಡಿಸಿ’ ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ಪಾಸ್ವಾನ್ ಅವರಿಗೆ ಧಮ್ಕಿ ಸಂದೇಶ ಕಳುಹಿಸಲಾಗಿದೆ ಎಂದು ದೂರಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಪಾಸ್ವಾನ್ ಅವರು ರಾಜ್ಯ ರಾಜಕೀಯದಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಬೆದರಿಕೆ ಬರುತ್ತಿರುವ ಸಾಧ್ಯತೆಯಿದೆ ಎಂದು ಭಟ್ ಅಭಿಪ್ರಾಯಪಟ್ಟಿದ್ದಾರೆ. ಈ ಕೃತ್ಯ ಕ್ರಿಮಿನಲ್ ಉದ್ದೇಶ ಹೊಂದಿದ್ದು, ಕಾನೂನುಬಾಹಿರ ಚಟುವಟಿಕೆಗೆ ಸೇರಿದವರೆಂದೇ ಶಂಕಿಸಲಾಗಿದೆ. ಪೊಲೀಸರಿಗೆ ನೀಡಿದ ದೂರಿನಲ್ಲಿ ಅವರು, ತ್ವರಿತ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪಾಟ್ನಾ ಸೈಬರ್ ವಿಭಾಗದ ಡಿಸಿಪಿ ನಿತೀಶ್ ಚಂದ್ರ ಧರಿಯಾ ಪ್ರತಿಕ್ರಿಯಿಸಿ, ಜುಲೈ 11ರ ರಾತ್ರಿ 9 ಗಂಟೆಗೆ ಈ ಜೀವ ಬೆದರಿಕೆಯ ಕುರಿತು ಮಾಹಿತಿ ಲಭ್ಯವಾಗಿದ್ದು, ಸಂಬಂಧಿತ ಇನ್ಸ್ಟಾಗ್ರಾಂ ಖಾತೆ ಹಾಗೂ ಸಂದೇಶಗಳ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ಆರೋಪಿಯ ಪತ್ತೆಹಚ್ಚಲು ಹಾಗೂ ಕಾನೂನು ಕ್ರಮ ಜರುಗಿಸಲು ತನಿಖೆ ಪ್ರಾರಂಭವಾಗಿದೆ ಎಂದಿದ್ದಾರೆ.