ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಉಕ್ಕು ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಹೆಚ್ಡಿ ಕುಮಾರಸ್ವಾಮಿ ಅವರು ಮೊದಲಿಗೆ ಕರ್ನಾಟಕಕ್ಕೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕಿದ್ದಾರೆ.
ಈ ಖುಷಿಯನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಹೆಚ್ಡಿ ಕುಮಾರಸ್ವಾಮಿ, ಕೇಂದ್ರದ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಕಡತಕ್ಕೆ ಸಹಿ ಹಾಕಿದೆ. ಅದು ಕರ್ನಾಟಕಕ್ಕೆ ಸಂಬಂಧಿಸಿದ ಕಡತ ಎನ್ನುವುದು ವಿಶೇಷ ಎಂದು ಬರೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿ ಕಳೆದ ಜೂನ್ 9ರಂದು ಪ್ರಮಾಣ ವಚನ ಸ್ವೀಕರಿಸಿದ್ದ ಹೆಚ್ಡಿ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ದೇವದಾರಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆಗಾಗಿ ಕೆಐಓಸಿಎಲ್ ಲಿಮಿಟೆಡ್‌ನ ಮೊದಲ ಕಡತಕ್ಕೆ ಸಹಿ ಹಾಕಿದ್ದಾರೆ.
ರಾಷ್ಟ್ರದ ಆರ್ಥಿಕತೆಯನ್ನು ಗಣನೀಯವಾಗಿ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುವ ಉಕ್ಕಿನ ವಲಯದಲ್ಲಿ ನಡೆಯುತ್ತಿರುವ ಕೆಲಸಗಳು ಮತ್ತು ಚಟುವಟಿಕೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಅಧಿಕಾರಿಗಳಿಂದ ಹೆಚ್ಡಿ ಕುಮಾರಸ್ವಾಮಿ ಪಡೆದುಕೊಂಡಿದ್ದಾರೆ.