ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಎಥೆನಾಲ್ ಹಂಚಿಕೆ’ ಕುರಿತು ನೀಡಿರುವ ಹೇಳಿಕೆಗಳಿಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಎಂ ಕುರ್ಚಿ ಉಳಿಸಿಕೊಳ್ಳಲು ಪರದಾಡುತ್ತಿರುವ ಸಿದ್ದರಾಮಯ್ಯ ಅವರು ಹತಾಶೆಯಿಂದ, ಸರಿಯಾದ ದತ್ತಾಂಶ ಮತ್ತು ಅಧಿಕಾರಿಗಳಿಂದ ನೈಜ ಮಾಹಿತಿ ಪಡೆಯದೆ ಮನಸೋ ಇಚ್ಛೆ ಮಾತನಾಡುತ್ತಿರುವುದು ರಾಜ್ಯದ ದುರಂತ ಎಂದು ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ತಿರುಗೇಟು ನೀಡಿರುವ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ‘ಸತ್ಯಾಂಶ ಅರಿತೋ-ಅರಿಯದೆಯೋ ಬರೀ ಸುಳ್ಳೆಂಬ ಮರಳಿನ ಅರಮನೆ ಕಟ್ಟುತ್ತಿದ್ದಾರೆ’ ಎಂದು ಕುಟುಕಿದ್ದಾರೆ.
ದತ್ತಾಂಶಗಳ ಸತ್ಯಾಂಶ ಏನು?
ಸಿದ್ದರಾಮಯ್ಯನವರು ತಮ್ಮ ಹೇಳಿಕೆಗಳಿಗೆ ಆಧಾರವಾಗಿ ಉಲ್ಲೇಖಿಸಿದ ಸಂಸತ್ತಿನ ಉತ್ತರವು ಕೇವಲ 30.06.2025 ರವರೆಗಿನ ದತ್ತಾಂಶವನ್ನು ಮಾತ್ರ ಒಳಗೊಂಡಿದೆ. ಆದರೆ, ಎಥೆನಾಲ್ ಸರಬರಾಜು ವರ್ಷವು ವಾಸ್ತವವಾಗಿ ನವೆಂಬರ್‌ನಿಂದ ಪ್ರಾರಂಭವಾಗಿ ಅಕ್ಟೋಬರ್‌ನಲ್ಲಿ ಕೊನೆಗೊಳ್ಳುತ್ತದೆ.
ಪ್ರಲ್ಹಾದ್ ಜೋಶಿ ಅವರು, 2024-25ರ ಅವಧಿಯಲ್ಲಿ ಕರ್ನಾಟಕ ರಾಜ್ಯವೊಂದರಿಂದಲೇ ತೈಲ ಮಾರುಕಟ್ಟೆ ಕಂಪನಿಗಳಿಗೆ (OMC) ಗಳಿಗೆ ಒಟ್ಟು 139.8 ಕೋಟಿ ಲೀಟರ್ ಎಥೆನಾಲ್ ಅನ್ನು ಪೂರೈಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
“ಮುಖ್ಯಮಂತ್ರಿಗಳಾಗಿ ತಾವು ಮಾತನಾಡುವ ಮೊದಲು, ದತ್ತಾಂಶಗಳನ್ನ ಸರಿಯಾಗಿ ಅರ್ಥ ಮಾಡಿಕೊಂಡು, ತಮ್ಮ ಅಧಿಕಾರಿಗಳಿಂದ ಸರಿಯಾದ ಮಾಹಿತಿ ಪಡೆದು, ಅರ್ಥಮಾಡಿಕೊಂಡು ನಂತರ ಮಾತನಾಡಬೇಕು ಎಂಬ ಕನಿಷ್ಠ ಪರಿಜ್ಞಾನವೂ ಸಿಎಂಗೆ ಇಲ್ಲದಿರುವುದು ನಿಜಕ್ಕೂ ರಾಜ್ಯದ ದುರಂತ” ಎಂದು ಕೇಂದ್ರ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

