Sunday, January 11, 2026

‘ಯೂನಿಟಿ ಮಾಲ್’ ವಿವಾದ: ಕಟ್ಟಡಕ್ಕೆ ವಿರೋಧವಿಲ್ಲ, ನಮ್ಮ ಜಾಗ ಬೇಕು! ಪ್ರಮೋದಾ ದೇವಿ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯೂನಿಟಿ ಮಾಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಕುರಿತು ಯದುವಂಶದ ಪ್ರಮೋದಾದೇವಿ ಒಡೆಯರ್ ಅವರು ಇಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಮಾಲ್ ನಿರ್ಮಾಣಕ್ಕೆ ತಮ್ಮ ವಿರೋಧವಿಲ್ಲ, ಆದರೆ “ನಮ್ಮ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಸರಿಯಲ್ಲ” ಎಂಬುದು ತಮ್ಮ ನಿಲುವಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ.

ಪ್ರಮೋದಾದೇವಿ ಒಡೆಯರ್ ಅವರು ಯೂನಿಟಿ ಮಾಲ್ ಸ್ಥಾಪನೆಗೆ ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪಗಳ ನಡುವೆ, ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಮೈಸೂರು ಕಸಬಾ ಹೋಬಳಿಯ ಸರ್ವೆ ನಂ.1 ರಲ್ಲಿರುವ ದೊಡ್ಡಕೆರೆ ಟ್ಯಾಂಕ್ ಬೆಡ್ ಭೂಮಿಯಲ್ಲಿ ಮಾಲ್ ನಿರ್ಮಾಣ ಮಾಡಲಾಗುತ್ತಿದ್ದು, ಇದು ತಮ್ಮ ಖಾಸಗಿ ಆಸ್ತಿಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

“ಕರ್ನಾಟಕ ಸರ್ಕಾರವು ಕರಕುಶಲ ವಸ್ತುಗಳು ಮತ್ತು ಜಿಐ ಟ್ಯಾಗ್ ಮಾಡಿದ ಉತ್ಪನ್ನಗಳನ್ನು ಪ್ರದರ್ಶಿಸಲು ಮಾಲ್ ಸ್ಥಾಪಿಸಲಿ. ಅದಕ್ಕೆ ನನ್ನ ವಿರೋಧವಿಲ್ಲ. ಆದರೆ ಸರ್ಕಾರವು ತನಗೆ ಸೇರಿದ ಯಾವುದೇ ಭೂಮಿಯನ್ನು ಹಂಚಿಕೆ ಮಾಡಲಿ. ಈ ನಿರ್ದಿಷ್ಟ ಖಾಸಗಿ ಆಸ್ತಿಯನ್ನು ಸರ್ಕಾರವು ಹಂಚಿಕೆ ಮಾಡುವುದು ಸರಿಯಲ್ಲ. ಹಾಗಾಗಿ ನ್ಯಾಯಾಲಯದಲ್ಲಿ ಈ ವಿಚಾರದಲ್ಲಿ ಪ್ರಕರಣ ದಾಖಲಿಸಿದ್ದೇನೆ” ಎಂದು ಪ್ರಮೋದಾದೇವಿ ಹೇಳಿದ್ದಾರೆ.

1950ರ ಒಪ್ಪಂದದ ಪ್ರಸ್ತಾಪ: ಈ ಭೂಮಿಯ ಮಾಲೀಕತ್ವದ ವಿವಾದವು ಭಾರತ ಸರ್ಕಾರ ಮತ್ತು ಅಂದಿನ ರಾಜ್ಯ ಸರ್ಕಾರದ ನಡುವೆ ರಾಜ್ಯಗಳ ವಿಲೀನದ ಸಮಯದಲ್ಲಿ, ಜನವರಿ 23, 1950 ರಂದು ನಡೆದ ಒಪ್ಪಂದದ ಮೂಲಕ ಇತ್ಯರ್ಥವಾಗಿದೆ ಎಂದು ಅವರು ದಾಖಲೆಗಳನ್ನು ಉಲ್ಲೇಖಿಸಿದ್ದಾರೆ.

“ನನ್ನ ಪೂರ್ವಜರ ಭೂಮಿಯನ್ನು ಉಳಿಸಿಕೊಳ್ಳುವುದು ಮತ್ತು ರಕ್ಷಿಸುವುದು ನನ್ನ ಜವಾಬ್ದಾರಿಯಾಗಿದೆ, ಮತ್ತು ನಾನು ಆ ಕೆಲಸವನ್ನು ಮಾಡಿದ್ದೇನೆ” ಎಂದು ಅವರು ತಮ್ಮ ಕಾನೂನು ಹೋರಾಟವನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರಮೋದಾದೇವಿ ಅವರು ಸಲ್ಲಿಸಿರುವ ಅರ್ಜಿಯಲ್ಲಿ ತಮ್ಮ ನಿಲುವನ್ನು ದೃಢೀಕರಿಸಲು ಸಂಬಂಧಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಸರ್ಕಾರದ ಪ್ರತಿಕ್ರಿಯೆಗಾಗಿ ಈ ಪ್ರಕರಣದ ಮುಂದಿನ ವಿಚಾರಣೆ ಕರ್ನಾಟಕದ ಹೈಕೋರ್ಟ್ ಮುಂದೆ ಬರಲಿದೆ. ಈ ದಾವೆಯು ಮಾಲ್ ಸ್ಥಾಪನೆಗೆ ತಾತ್ಕಾಲಿಕ ತಡೆ ತಂದಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!