ಹೊಸದಿಗಂತ ವರದಿ ಹಾಸನ:
ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ, ಕಳ್ಳಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೇಶವಯ್ಯ (50) ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ರೈತ. ಸೂರ್ಯೋದಯ ಫೈನಾನ್ಸ್‌ನಿಂದ 5 ಲಕ್ಷ, ಬೆಲ್ಟ್ ಸ್ಟಾರ್ ಮೈಕ್ರೋಫೈನಾನ್ಸ್‌ನಿಂದ 60 ಸಾವಿರ ಸಾಲ ಮಾಡಿದ್ದರು. ಸೂರ್ಯೋದಯ ಫೈನಾನ್ಸ್ ಸಿಬ್ಬಂದಿ ಹಣ ಪಾವತಿಸುವಂತೆ ರೈತ ಕೇಶವಯ್ಯ ಮನೆ ಬಾಗಿಲಿಗೆ ನೋಟೀಸ್ ಅಂಟಿಸಿದ್ದರು.
ನಂತರ ಕೋರ್ಟ್ ಮೆಟ್ಟಿಲೇರಿದ್ದ ಸೂರ್ಯೋದಯ ಫೈನಾನ್ಸ್ ಮನೆ ಹರಾಜು ಮಾಡುವಂತೆ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಆದೇಶ ನೀಡಿದ್ದರು. ವಾಸದ ಮನೆ ಹರಾಜಿಗೆ ಬಂದಿದ್ದರಿಂದ ಕಂಗಾಲಾಗಿ ಸಂಪೂರ್ಣ ಮನನೊಂದಿದ್ದ ಕೇಶವಯ್ಯ ಇಂದು ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.