ಹೊಸದಿಗಂತ ಡಿಜಿಟಲ್ ಡೆಸ್ಕ್
ಪ್ರಯಾಗ್‌ರಾಜ್ ಹಿಂಸಾಚಾರದ ಪ್ರಮುಖ ಆರೋಪಿಯ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದು, ʼಯೋಗಿ ಆದಿತ್ಯಾನಾಥ್ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಂತೆʼ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
“ಯುಪಿ ಮುಖ್ಯಮಂತ್ರಿ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಂತೆಯೆ ಕ್ರಮಗಳನ್ನು ಜರುಗಿಸುತ್ತಿದ್ದಾರೆ. ಅವರು ಅಪರಾಧಿ ಎಂದು ಘೋಷಿಸಿದವರ ಮತ್ತು ಅವರ ಮನೆಗಳನ್ನು ಕೆಡವಿಹಾಕಿಬಿಡುತ್ತಾರೆ ಎಂದು ಗುಜರಾತ್‌ನ ಕಚ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಓವೈಸಿ ಹೇಳಿದ್ದಾರೆ.
ಪ್ರವಾದಿ ಕುರಿತಾದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಪ್ರಯಾಗ್‌ರಾಜ್‌ನಲ್ಲಿ ಜೂನ್ 10 ರಂದು ನಡೆದ ಹಿಂಸಾಚಾರದ ಸಂಚುಕೋರ ಜಾವೇದ್ ಮೊಹಮ್ಮದ್ ಅಲಿಯಾಸ್ ಪಂಪ್ ನ ಮನೆಯನ್ನು ಭಾರೀ ಪೊಲೀಸ್ ನಿಯೋಜನೆಯ ನಡುವೆ ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರ (ಪಿಡಿಎ) ಭಾನುವಾರ ನೆಲಸಮಗೊಳಿಸಿದೆ.
ಆರೋಪಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮುಖಂಡ ಮತ್ತು ಕಾರ್ಯಕರ್ತೆ ಅಫ್ರೀನ್ ಫಾತಿಮಾ ಅವರ ತಂದೆ. ಫಾತಿಮಾ ಕಳೆದ ವರ್ಷ ಕೇಂದ್ರದ ವಿವಾದಾತ್ಮಕ ಪೌರತ್ವ ಕಾನೂನಿನ ವಿರುದ್ಧದ ಪ್ರತಿಭಟನೆಯ ಭಾಗವಾಗಿದ್ದಳು.. ಈ ವಾರದ ಹಿಂಸಾಚಾರದಲ್ಲಿ ಆಕೆಯ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಆಕ್ಷೇಪಾರ್ಹ ಪೋಸ್ಟರ್‌ಗಳು ದೊರಕಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಧ್ವಂಸಕ್ಕೂ ಮುನ್ನ ಭಾನುವಾರ ಬೆಳಗ್ಗೆ ಅವರ ಮನೆಯಲ್ಲಿ ಶೋಧ ನಡೆಸಲಾಗಿತ್ತು. “ಆರೋಪಿ ಮನೆಯಲ್ಲಿ 12 ಬೋರ್ ಅಕ್ರಮ ಪಿಸ್ತೂಲ್ ಮತ್ತು 315 ಬೋರ್ ಪಿಸ್ತೂಲ್ ಮತ್ತು ಮದ್ದುಗುಂಡುಗಳು ಮತ್ತು ಗೌರವಾನ್ವಿತ ನ್ಯಾಯಾಲಯದ ವಿರುದ್ಧ ಆಕ್ಷೇಪಾರ್ಹ ಸಂದೇಶಗಳಿದ್ದ ದಾಖಲೆಗಳನ್ನು ಪತ್ತೆಯಾಗಿವೆ” ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಯಾಗ್ರಾಜ್ ಅಜಯ್ ಕುಮಾರ್ ಹೇಳಿದ್ದಾರೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ