Monday, November 17, 2025

ಬಿಹಾರ ರಾಜಕೀಯದಲ್ಲಿ ಕೋಲಾಹಲ! ಆರ್‌ಜೆಡಿ ಕುಟುಂಬದಲ್ಲಿ ಬಿರುಕು; ಫ್ಯಾಮಿಲಿ ಬೇಡ, ರಾಜಕೀಯವೂ ಬೇಡ ಎಂದ ರೋಹಿಣಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ ಮುಂದುವರೆದಿದೆ. ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ದಾಖಲಿಸಿ ವಿರೋಧ ಪಕ್ಷವಾಗಿದ್ದ ಆರ್‌ಜೆಡಿ ಮತ್ತು ಮಹಾಘಟಬಂಧನ್‌ಗೆ ತೀವ್ರ ಹೊಡೆತ ನೀಡಿದರೆ, ಈಗ ಆ ಸೋಲಿನ ರಾಜಕೀಯ ತೀವ್ರತೆ ಲಾಲು ಪ್ರಸಾದ್ ಯಾದವ್ ಅವರ ಮನೆ ಬಾಗಿಲಿಗೂ ತಲುಪಿದೆ. ರಾಜಕೀಯವಾಗಿ ಈಗಾಗಲೇ ಆತಂಕದಲ್ಲಿದ್ದ ಆರ್‌ಜೆಡಿಗೆ ಮತ್ತೊಂದು ಅನಿರೀಕ್ಷಿತ ಆಘಾತ ಎದುರಾಗಿದೆ. ಲಾಲು ಪುತ್ರಿ ರೋಹಿಣಿ ಆಚಾರ್ಯ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಚುನಾವಣಾ ಸೋಲಿನ ನಂತರ ಮೌನವಾಗಿದ್ದ ಆರ್‌ಜೆಡಿ ಪಾಳಯದಲ್ಲಿ ಆಂತರಿಕ ಕಲಹ ದಿನೇದಿನೇ ಗರಿಷ್ಠ ಮಟ್ಟಕ್ಕೆ ಏರುತ್ತಿರುವ ನಡುವೆ, ರೋಹಿಣಿ ಆಚಾರ್ಯ ಇದ್ದಕ್ಕಿದ್ದಂತೆ ತಮ್ಮ ರಾಜಕೀಯ ಜೀವನಕ್ಕೆ ತೆರೆ ಎಳೆಯುವುದಾಗಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ ರೋಹಿಣಿ, “ನಾನು ರಾಜಕೀಯವನ್ನು ತೊರೆಯುತ್ತಿದ್ದೇನೆ. ನನ್ನ ಕುಟುಂಬದಿಂದಲೂ ದೂರವಾಗುತ್ತಿದ್ದೇನೆ. ನನ್ನ ಮೇಲೆ ಹೊರಿಸಿದ ಎಲ್ಲಾ ಆರೋಪಗಳನ್ನು ನಾನು ಹೊರುತ್ತೇನೆ” ಎಂದು ಬರೆದಿದ್ದು, ಆರ್‌ಜೆಡಿಯ ಒಳಗಿನ ಬಿರುಕುಗಳನ್ನು ಮತ್ತಷ್ಟು ಸ್ಪಷ್ಟಪಡಿಸಿದೆ.

ಎನ್‌ಡಿಎ ಗೆಲುವಿನ ನಂತರ ಮಹಾಘಟಬಂಧನ್ ಪಾಳಯದಲ್ಲಿ ನಾಯಕತ್ವದ ಮೇಲೆ ತೀವ್ರ ಅಸಮಾಧಾನ ಉಂಟಾಗಿದ್ದು, ತೇಜಸ್ವಿ ಯಾದವ್ ಅವರ ನಾಯಕತ್ವ ಸಾಮರ್ಥ್ಯವನ್ನೂ ಬಹಿರಂಗವಾಗಿ ಪ್ರಶ್ನಿಸುವ ಸ್ಥಿತಿ ನಿರ್ಮಾಣವಾಗಿದೆ. ರೋಹಿಣಿ ಅವರ ನಿರ್ಧಾರವು ಈ ಗೊಂದಲಕ್ಕೆ ಮತ್ತೊಂದು ತಿರುವು ನೀಡಿದಂತಾಗಿದೆ. ಈಗಾಗಲೇ ರಾಜಕೀಯದಲ್ಲಿ ಅಂತರ ಕಾಯ್ದುಕೊಂಡಿರುವ ತೇಜ್ ಪ್ರತಾಪ್ ಯಾದವ್ ಮತ್ತು ಪಕ್ಷದೊಳಗಿನ ಭಿನ್ನಮತಗಳು ಸೇರಿ, ಆರ್‌ಜೆಡಿಯ ಭವಿಷ್ಯಕ್ಕೆ ಕತ್ತಲೆ ಆವರಿಸಿರುವ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ರೋಹಿಣಿ ಅವರ ನಿರ್ಗಮನವು ಕೇವಲ ಕುಟುಂಬದ ರಾಜಕೀಯ ಬಿರುಕು ಮಾತ್ರವಲ್ಲ, ಬಿಹಾರದ ರಾಜ್ಯ ರಾಜಕೀಯದಲ್ಲಿಯೂ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ.

error: Content is protected !!