October 1, 2026
Thursday, October 1, 2026
spot_img

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ: ಅಪ್ರಬುದ್ಧ, ಅವಿವೇಕಿ ಸರ್ಕಾರ ಎಂದ ಕರವೇ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಯೋಜನೆ ಮಾಡಲು ಸರ್ಕಾರ ಮುಂದಾಗಿದ್ದು, ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಇದು ಸರ್ಕಾರ ಅಪ್ರಬುದ್ಧ ಹಾಗೂ ಅವಿವೇಕದ ನಡೆ ಎಂದು ಟೀಕಿಸಿದ್ದಾರೆ. ಇದು ದುರಹಂಕಾರ ಅಲ್ವಾ? ಏನು ಮಾಡಿದರೂ ನಡೆಯುತ್ತದೆ ಅನ್ನೋ ಅಹಂ ಯಾಕೆ? ಅಧಿಕಪ್ರಸಂಗದ ನಿರ್ಧಾರಗಳನ್ನು ಕೈಗೊಳ್ಳುವ ಬದಲು ಇರುವ ಸಾವಿರ ಕೆಲಸಗಳನ್ನು ಮಾಡಿ ಮುಗಿಸಬಹುದು. ಕರವೇ ಈ ನಿರ್ಣಯವನ್ನು ತೀವ್ರವಾಗಿ ಖಂಡಿಸುತ್ತದೆ. ಈ ಕಾರ್ಯಕ್ರಮ ನಡೆಯುವುದಕ್ಕೆ ಅವಕಾಶ ನೀಡುವುದಿಲ್ಲ.

ಸರ್ಕಾರ ಇಷ್ಟೊಂದು ಫ್ರೀ ಇದೆಯಾ? ಮಾಡೋದಕ್ಕೆ ಸಾವಿರ ಕೆಲಸಗಳಿವೆ ಅದನ್ನು ಮಾಡಲಿ. ಅದನ್ನು ಬಿಟ್ಟು ಉರ್ದು ಹಬ್ಬವಂತೆ! ಸ್ಪಷ್ಟವಾಗಿ ಹೇಳುವುದಾದರೆ ಕನ್ನಡಿಗರ ಮೇಲೆ ಉರ್ದು ಭಾಷಿಕರನ್ನು, ಉರ್ದು ಭಾಷಿಕರ ಮೇಲೆ ಕನ್ನಡಿಗರನ್ನು ಎತ್ತಿಕಟ್ಟುವ ಹುನ್ನಾರ ಇದು. ಹಿಂದೆ ಉರ್ದು ವಾರ್ತೆ ಸಂಬಂಧ ನಡೆದ ಕೋಮುಗಲಭೆ ಸರ್ಕಾರ ಮರೆತಿದೆಯೇ? ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವುದು ಎಂದರೆ ಇದೇ ಅಲ್ಲವೇ? ಎಂದಿದ್ದಾರೆ.

ನೀವು ಉರ್ದು ಹಬ್ಬ ಮಾಡೋಕೆ ಬಿಟ್ಟರೆ ನಂತರ ಹಿಂದಿ ಹಬ್ಬ ಮಾಡಲು ಪರ್ಮಿಷನ್‌ ಕೇಳುತ್ತಾರೆ. ಆಮೇಲೆ ತೆಲುಗು, ತಮಿಳು, ಮರಾಠಿ ಎಲ್ಲ ಹಬ್ಬವನ್ನೂ ಮಾಡುತ್ತಾರೆ ಕನ್ನಡಿಗರನ್ನು ಮಾರಿಬಿಡುತ್ತಾರೆ. ಈ ಹುಚ್ಚಾಟವನ್ನು ಸಿಎಂ ನಿಲ್ಲಿಸಬೇಕು. ಇಲ್ಲ ನಾವು ಚಳಿ ಬಿಡಿಸಬೇಕಾಗುತ್ತದೆ ಎಂದಿದ್ದಾರೆ.

Must Read