ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ಗುಂಡಿನ ದಾಳಿಗಳ ವಿರುದ್ಧ ತೀವ್ರ ಪ್ರತಿರೋಧಗಳು ವ್ಯಕ್ತವಾಗುತ್ತಿದ್ದರೂ ಗುಂಡಿನ ದಾಳಿಗಳು ವರದಿಯಾಗುತ್ತಲೇ ಇವೆ. ನಿನ್ನೆ ರಾತ್ರಿ ಅಲಬಾಮಾದ ಪ್ರತಿಷ್ಟಿತ ಚರ್ಚ್ ಒಂದರಲ್ಲಿ ಗುಂಡಿನ ದಾಳಿ ನಡೆದಿದ್ದು ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರೆ ಇಬ್ಬರಿಗೆ ಗಾಯಗಳಾಗಿವೆ.
ವೆಸ್ಟಾವಿಯಾ ಹಿಲ್ಸ್‌ನ ಬರ್ಮಿಂಗ್ಹ್ಯಾಮ್ ಉಪನಗರದಲ್ಲಿರುವ ಸೇಂಟ್ ಸ್ಟೀಫನ್ಸ್ ಎಪಿಸ್ಕೋಪಲ್ ಚರ್ಚ್‌ನಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಅಲ್ಲಿನ ಪೋಲೀಸರು ಮೂಲಗಳಿಗೆ ತಿಳಿಸಿದ್ದಾರೆ. ಸಂಜೆ 6.22ರ ಸುಮಾರಿಗೆ ಗುಂಡಿನ ದಾಳಿ ನಡೆದಿರುವ ಕುರಿತು ಅನಾಮಿಕ ಕರೆ ಸ್ವೀಕರಿಸಿದ ಪೋಲೀಸರು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಇಬ್ಬರು ಗಾಯಾಳುಗಳನ್ನು ಚಿಕಿತ್ಸೆಗಾಗಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಲು ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ಇತ್ತೀಚಿಗೆ ಅಮೆರಿಕದಲ್ಲಿ ಹೆಚ್ಚುತ್ತಿರುವ ಗನ್ ಹಿಂಸಾಚಾರದಲ್ಲಿ ಇದು ಇತ್ತೀಚಿನದಾಗಿದ್ದು ಕಳೆದ ಶನಿವಾರವಷ್ಟೇ ಸಾವಿರಾರು ಅಮೆರಿಕನ್ ನಾಗರೀಕರು ಶಸ್ತ್ರಾಸ್ತ್ರ ಕಾಯಿದೆಯನ್ನು ಮರುಪರಿಶೀಲಿಸುವಂತೆ ಪ್ರತಿಭಟನೆ ನಡೆಸಿ ಸರ್ಕಾರವನ್ನು ಒತ್ತಾಯಿಸಿದ್ದರು.