ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್‌ನಲ್ಲಿ ಪತನಗೊಂಡಿದ್ದ ಅಮೆರಿಕದ ಫೈಟರ್ ಜೆಟ್ ಪೈಲಟ್‌ನ್ನು ರಕ್ಷಿಸಲು ಯುಎಸ್ ನಡೆಸಿದ ಬೃಹತ್ ಕಾರ್ಯಾಚರಣೆ ವೇಳೆ ಐವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಈ ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಅಮೆರಿಕದ ಪ್ರಬಲ ಸಾರಿಗೆ ವಿಮಾನವೊಂದು ನಾಶವಾಗಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಇರಾನ್ ಪಡೆಗಳು ಅಮೆರಿಕದ F-15E ಯುದ್ಧ ವಿಮಾನವನ್ನು ಹೊಡೆದುರುಳಿಸಿದ ನಂತರ, ಅದರ ಪೈಲಟ್ ಸುಮಾರು ಎರಡು ದಿನಗಳ ಕಾಲ ನಾಪತ್ತೆಯಾಗಿದ್ದರು. ಇಸ್ಫಹಾನ್‌ನ ದಕ್ಷಿಣ ಭಾಗದಲ್ಲಿ ಈ ವಿಮಾನ ಪತನಗೊಂಡಿತ್ತು ಎನ್ನಲಾಗಿದೆ. ಪೈಲಟ್‌ನ್ನು ಸುರಕ್ಷಿತವಾಗಿ ಕರೆತರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇರ ನಿರ್ದೇಶನದಂತೆ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.
ಇರಾನ್ ಮಾಧ್ಯಮಗಳ ಪ್ರಕಾರ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ C-130 ಮಿಲಿಟರಿ ಸಾರಿಗೆ ವಿಮಾನ ಮತ್ತು ಎರಡು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳು ಪತನಗೊಂಡಿವೆ. ಕಾರ್ಯಾಚರಣೆಯ ಸ್ಥಳದಲ್ಲಿ ಸಿ-130 ವಿಮಾನದ ಅವಶೇಷಗಳು ಸುಟ್ಟು ಕರಕಲಾಗಿರುವ ಫೋಟೊಗಳು ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದೇ ವೇಳೆ ಇರಾನ್ ಸೇನೆಯು ಇಸ್ರೇಲಿ ಡ್ರೋನ್ ಒಂದನ್ನು ಸಹ ಹೊಡೆದುರುಳಿಸಿರುವುದಾಗಿ ಹಕ್ಕು ಸಾಧಿಸಿದೆ.
ಈ ಕುರಿತು ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, “ನಮ್ಮ ಕೆಚ್ಚೆದೆಯ ಪೈಲಟ್ ಅನ್ನು ರಕ್ಷಿಸಲಾಗಿದೆ” ಎಂದು ಖಚಿತಪಡಿಸಿದ್ದಾರೆ. ಈ ಕಾರ್ಯಾಚರಣೆಗಾಗಿ ಅಮೆರಿಕವು ವಿಶ್ವದ ಅತ್ಯಂತ ಮಾರಕ ಆಯುಧಗಳನ್ನು ಹೊಂದಿರುವ ಡಜನ್ಗಟ್ಟಲೆ ವಿಮಾನಗಳನ್ನು ಹಾಗೂ ನೂರಾರು ವಿಶೇಷ ಪಡೆಗಳನ್ನು ಬಳಸಿತ್ತು ಎಂದು ವರದಿಯಾಗಿದೆ. ಪೈಲಟ್ ರಕ್ಷಣೆಯಾಗಿದ್ದರೂ, ಐವರು ಯೋಧರ ಬಲಿ ಮತ್ತು ವಿಮಾನಗಳ ನಾಶ ಅಮೆರಿಕಕ್ಕೆ ದೊಡ್ಡ ಹಿನ್ನಡೆಯೆಂದು ವಿಶ್ಲೇಷಿಸಲಾಗುತ್ತಿದೆ.



