ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಯುವ ಶಟ್ಲರ್ ಹಾಗೂ ಕರ್ನಾಟಕದ ಮಂಗಳೂರಿನ ಕಾರ್ಕಳದ ನಿವಾಸಿ ಆಯುಶ್ ಶೆಟ್ಟಿ ಅವರು ತಮ್ಮ ಬ್ಯಾಡ್ಮಿಂಟನ್ ವೃತ್ತಿಜೀವಿತದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಅವರು ಯುಎಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಗೆಲುವು ದಾಖಲಿಸಿ, ತಮ್ಮ ಚೊಚ್ಚಲ BWF ವರ್ಲ್ಡ್ ಟೂರ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
2023ರ ಕಿರಿಯರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಪದಕ ಗೆದ್ದಿದ್ದ 20 ವರ್ಷದ ಆಯುಶ್ ಶೆಟ್ಟಿ, ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಕೆನಡಾದ ಮೂರನೇ ಶ್ರೇಯಾಂಕಿತ ಆಟಗಾರ ಬ್ರಿಯಾನ್ ಯಾಂಗ್ ವಿರುದ್ಧ 21-18, 21-13 ಅಂಕಗಳ ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸಿದರು. ಕೇವಲ 47 ನಿಮಿಷಗಳಲ್ಲಿ ಪಂದ್ಯವನ್ನೆ ತನ್ನ ಪಾಳಯಕ್ಕೆ ಸೆಳೆಯುವ ಮೂಲಕ, ಆಯುಶ್ ಯಾಂಗ್ ವಿರುದ್ಧ ತಮ್ಮ ಮೂರನೇ ಗೆಲುವನ್ನು ದಾಖಲಿಸಿದರು.
ಈ ಟೂರ್ನಿಯು ಆಯುಶ್ ಶೆಟ್ಟಿಗೆ ಈ ವರ್ಷದ ಮೂರನೇ ಪ್ರಮುಖ ಸಾಧನೆ. ಇದಕ್ಕೂ ಮುನ್ನ ಅವರು ಮಲೇಷ್ಯಾ ಓಪನ್ ಮತ್ತು ತೈಪೆ ಓಪನ್‌ಗಳಲ್ಲಿ ಜಯ ಗಳಿಸಿದ್ದರು. 2023ರ ಒಡಿಶಾ ಮಾಸ್ಟರ್ಸ್‌ನಲ್ಲಿ ರನ್ನರ್‌ಅಪ್ ಆಗಿದ್ದ ಅವರು, ಬಹರೈನ್ ಇಂಟರ್‌ನ್ಯಾಷನಲ್ ಮತ್ತು 2024ರ ಡಚ್ ಓಪನ್‌ಗಳಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಇದಕ್ಕೆ ಪುರಸ್ಕಾರವಾಗಿ ಆಯುಶ್ 15.44 ಲಕ್ಷ ನಗದು ಬಹುಮಾನವೂ ಪಡೆದುಕೊಂಡಿದ್ದಾರೆ.
ಇದರೊಂದಿಗೆ, ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ 16 ವರ್ಷದ ತಾನ್ವಿ ಶರ್ಮಾ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ತಾನ್ವಿ ಅವರು ಅಮೆರಿಕದ ಅನುಭವೀ ಆಟಗಾರ್ತಿ ಬೀವೆನ್ ಝಾಂಗ್ ಎದುರು 11-21, 21-16, 10-21 ಅಂಕಗಳೊಂದಿಗೆ ಸೋಲೊಪ್ಪಿಕೊಂಡರು.