ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಿದ್ದೇ ಆಟ. ದಿನಕ್ಕೊಂದು ಅಚ್ಚರಿಯ ನಿರ್ಧಾರ, ದಿನಕ್ಕೊಂದು ಆಘಾತಕಾರಿ ಹೇಳಿಕೆ .
ಇದೀಗ ಟ್ರಂಪ್, ಓವಲ್ ಕಚೇರಿಯಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಬಂಧಿಸುವ AI ಆಧಾರಿತ ವೀಡಿಯೋವೊಂದನ್ನು ತಮ್ಮ ಟ್ರೂಥ್ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
“ನೋ ಒನ್ ಈಸ್ ಅಬೋವ್ ಲಾ” (ಕಾನೂನಿಗಿಂತ ಯಾರೂ ದೊಡ್ಡವರಲ್ಲ) ಎಂಬ ಶೀರ್ಷಿಕೆಯಡಿ ಒಬಾಮ ಬಂಧನದ AI ವಿಡಿಯೋ ಬಿಡುಗಡೆ ಮಾಡಿರುವ ಡೊನಾಲ್ಡ್ ಟ್ರಂಪ್, ಅಮೆರಿಕದಲ್ಲಿ ಯಾವ ರಾಜಕಾರಣಿಯೂ ಕಾನೂನಿಗಿಂತ ದೊಡ್ಡವರಲ್ಲಎಂಬ ಸಂದೇಶ ಸಾರಿದ್ದಾರೆ.
ಅಮೆರಿಕದ ಪ್ರಸ್ತುತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರುವ ಹಂಚಿಕೊಂಡಿರುವ AI ಆಧಾರಿತ ವಿಡಿಯೋದಲ್ಲಿ, ಓವಲ್ ಕಚೇರಿಯಲ್ಲಿ ತಮ್ಮೊಂದಿಗೆ ಕುಳಿತಿದ್ದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು, ಇಬ್ಬರು ಎಫ್‌ಬಿಐ ಏಜೆಂಟ್‌ಗಳು ಕೈಕೋಳ ಹಾಕಿ ಬಂಧಿಸುತ್ತಿರುವ ದೃಶ್ಯಗಳಿವೆ. ಒಬಾಮ ಬಂಧನದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ನಗುತ್ತಿರುವುದನ್ನು ಕಾಣಬಹುದಾಗಿದೆ. ನಕಲಿ ವೀಡಿಯೊವು ಒಬಾಮಾ ಜೈಲಿನ ಬಟ್ಟೆ ಧರಿಸಿ ಕಂಬಿ ಹಿಂದೆ ನಿಂತಿರುವುದಿರೊಂದಿಗೆ ಕೊನೆಗೊಳ್ಳುತ್ತದೆ.
ಈ ವಿಡಿಯೋ ಕಾಲ್ಪನಿಕ ಎಂಬುದಕ್ಕೆ ಡೊನಾಲ್ಡ್ ಟ್ರಂಪ್ ಯಾವುದೇ ಹಕ್ಕು ನಿರಾಕರಣೆ ನೀಡಿಲ್ಲ. ಹಲವು ವಿಮರ್ಶಕರು ಅಮೆರಿಕದ ಅಧ್ಯಕ್ಷರ ಈ ನಡೆಯನ್ನು ಟೀಕಿಸಿದ್ದು, ಇದನ್ನು “ತೀವ್ರ ಬೇಜವಾಬ್ದಾರಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಬರಾಕ್ ಒಬಾಮ ಅವರು ಉನ್ನತ ಮಟ್ಟದ ಚುನಾವಣಾ ವಂಚನೆ ಎಸಗಿದ್ದಾರೆ” ಎಂಬ ಡೊನಾಲ್ಡ್ ಟ್ರಂಪ್ ಆರೋಪದ ಬೆನ್ನಲ್ಲೇ, ಈ ನಕಲಿ ವಿಡಿಯೋ ಬಿಡುಗಡೆಗೊಂಡಿರುವುದು ಅಮೆರಿಕ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.