Sunday, January 11, 2026

ವೆನೆಜುವೆಲಾದಲ್ಲಿ ಅಮೆರಿಕ ಸರ್ಜಿಕಲ್ ಸ್ಟ್ರೈಕ್: ಅಧಿಕಾರ ಕಳೆದುಕೊಂಡ ಮಡುರೊ ಈಗ ನ್ಯೂಯಾರ್ಕ್ ಜೈಲಿಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿ ಅಮೆರಿಕದ ಸೇನಾ ಪಡೆಗಳು ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಲಾಗಿದೆ. ಈ ಮಿಲಿಟರಿ ಕಾರ್ಯಾಚರಣೆಯ ವೇಳೆ ಕನಿಷ್ಠ 40 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಶನಿವಾರ ತಡರಾತ್ರಿ ಅಮೆರಿಕ ಪಡೆಗಳು ಮಿಂಚಿನ ವೇಗದಲ್ಲಿ ಕ್ಯಾರಕಾಸ್ ಮೇಲೆ ದಾಳಿ ನಡೆಸಿದವು. ಕಾರ್ಯಾಚರಣೆಯ ಸಂದರ್ಭದಲ್ಲಿ ಇಡೀ ನಗರವು ಕತ್ತಲೆಯಲ್ಲಿ ಮುಳುಗಿತ್ತು. ತೀವ್ರ ಸಂಘರ್ಷದ ನಂತರ ಅಮೆರಿಕದ ಕಮಾಂಡೋಗಳು ಮಡುರೊ ಅವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಈ ದಾಳಿಯು ವೆನೆಜುವೆಲಾದ ಮಿಲಿಟರಿ ವಲಯದಲ್ಲಿ ಭಾರಿ ಹಾನಿಯನ್ನುಂಟು ಮಾಡಿದೆ.

ಘಟನೆಯ ಕುರಿತು ಅಧಿಕೃತ ಹೇಳಿಕೆ ನೀಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಮ್ಮ ಸೇನಾ ಪಡೆಗಳು ಮಡುರೊ ಅವರನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿವೆ. ವೆನೆಜುವೆಲಾದಲ್ಲಿ ಸುರಕ್ಷಿತ ಮತ್ತು ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆ ಜಾರಿಗೆ ಬರುವವರೆಗೆ ಅಮೆರಿಕವು ಆ ದೇಶದ ಮೇಲೆ ತಾತ್ಕಾಲಿಕ ನಿಯಂತ್ರಣ ಹೊಂದಿರಲಿದೆ,” ಎಂದು ಘೋಷಿಸಿದ್ದಾರೆ.

ಬಂಧಿತ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಹೊತ್ತ ವಿಮಾನವು ಶನಿವಾರ ಸಂಜೆ ನ್ಯೂಯಾರ್ಕ್‌ನ ಸ್ಟೀವರ್ಟ್ ಏರ್ ನ್ಯಾಷನಲ್ ಗಾರ್ಡ್ ಬೇಸ್‌ಗೆ ಬಂದಿಳಿದಿದೆ. ಮುಂದಿನ ವಾರ ಮ್ಯಾನ್‌ಹ್ಯಾಟನ್ ಫೆಡರಲ್ ನ್ಯಾಯಾಲಯದಲ್ಲಿ ಮಡುರೊ ಅವರನ್ನು ಹಾಜರುಪಡಿಸಲಾಗುವುದು. ಅವರ ಮೇಲೆ ಮಾದಕವಸ್ತು ಸಾಗಾಣಿಕೆ ಮತ್ತು ಕಾನೂನುಬಾಹಿರ ಶಸ್ತ್ರಾಸ್ತ್ರಗಳ ಬಳಕೆಯ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ.

ಈ ಬೆಳವಣಿಗೆಯಿಂದಾಗಿ ದಕ್ಷಿಣ ಅಮೆರಿಕಾದಲ್ಲಿ ತೀವ್ರ ರಾಜಕೀಯ ಸಂಚಲನ ಉಂಟಾಗಿದ್ದು, ವೆನೆಜುವೆಲಾದ ಭವಿಷ್ಯದ ಮೇಲೆ ಇಡೀ ವಿಶ್ವದ ಕಣ್ಣು ನೆಟ್ಟಿದೆ.

error: Content is protected !!