ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು 2023ರ ಬೇಸಿಗೆಯಲ್ಲಿ ದಾಖಲೆ ಸಂಖ್ಯೆಯ ವಿದ್ಯಾರ್ಥಿ ವೀಸಾಗಳನ್ನು ನೀಡಲು ಸಜ್ಜಾಗಿದೆ. ಅಮೆರಿಕ ರಾಯಭಾರ ಕಚೇರಿಯು ತನ್ನ 7ನೇ ವಿದ್ಯಾರ್ಥಿ ವೀಸಾ ದಿನವನ್ನುದೆಹಲಿ, ಚೆನ್ನೈ, ಹೈದರಾಬಾದ್, ಕೋಲ್ಕೊತಾ ಮತ್ತು ಮುಂಬೈ ದೂತಾವಾಸ ಕಚೇರಿಗಳಲ್ಲಿ ನಡೆಸಿದ್ದು, ಸುಮಾರು 3,500 ಭಾರತೀಯ ವಿದ್ಯಾರ್ಥಿ ವೀಸಾ ಅರ್ಜಿದಾರರ ಸಂದರ್ಶನ ನಡೆಸಲಾಗಿದೆ.
ಉನ್ನತ ವಿದ್ಯಾಭ್ಯಾಸಕ್ಕೆ ಅಮೆರಿಕವನ್ನು ಆಯ್ಕೆ ಮಾಡಿಕೊಂಡು ವೀಸಾ ಪಡೆದಿರುವ ಭಾರತೀಯ ವಿದ್ಯಾರ್ಥಿಗಳನ್ನು ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮತ್ತು ಭಾರತದಾದ್ಯಂತ ಕಾನ್ಸುಲ್ ಜನರಲ್ಗಳು ಅಭಿನಂದಿಸಿದರು.
‘ನಾನು ಮೊದಲಿಗೆ ಯುವ ವಿದ್ಯಾರ್ಥಿಯಾಗಿ ಭಾರತಕ್ಕೆ ಬಂದಿದ್ದೆ. ಅನುಭವಗಳು ಹೇಗೆ ಪರಿವರ್ತನೆ ತರುತ್ತವೆ ಎನ್ನುವುದನ್ನು ಕಂಡಿದ್ದೇನೆ. ವಿದ್ಯಾರ್ಥಿ ವಿನಿಮಯವು ಅಮೆರಿಕ- ಭಾರತ ಬಾಂಧವ್ಯದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಅಮೆರಿಕ ಶಿಕ್ಷಣವು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಲ್ಲದೆ, ಜ್ಞಾನದ ಜಾಗತಿಕ ಜಾಲಕ್ಕೆ ಲಭ್ಯತೆ ನೀಡುತ್ತದೆ. ಆದ್ದರಿಂದ ಈ ಅವಕಾಶಗಳನ್ನು ಎಷ್ಟು ಸಾಧ್ಯವೋ ಅಷ್ಟು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ನಾವು ಇಲ್ಲಿದ್ದೇವೆ’ ಎಂದು ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದರು.
ಈ ವರ್ಷ 2,00,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಮೆರಿಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ, ಪ್ರಸ್ತುತ ಅಮೆರಿಕದಲ್ಲಿರುವರು ಶೇ. 20 ವಿದೇಶಿ ವಿದ್ಯಾರ್ಥಿಗಳನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ತಿಳಿಸಿದರು.
ಭಾರತದ ಕಾನ್ಸುಲರ್ ವ್ಯವಹಾರಗಳ ಪ್ರಭಾರ ಮಿನಿಸ್ಟರ್ ಕೌನ್ಸೆಲ್ಲರ್ ಬ್ರೆಂಡೆನ್ ಮುಲ್ಲಾರ್ಕೀ ಮಾತನಾಡಿ, ಕಳೆದ ವರ್ಷ ದಾಖಲೆಯ 1,25,000 ಭಾರತೀಯರಿಗೆ ವಿದ್ಯಾರ್ಥಿ ವೀಸಾಗಳನ್ನು ನೀಡಲಾಗಿದೆ. ಇದು ಬೇರಾವುದೇ ದೇಶಗಳ ಪೌರರಿಗಿಂತ ಹೆಚ್ಚಾಗಿದೆ. ಕಳೆದ ವರ್ಷ ಪ್ರತಿ ಐದು ವಿದ್ಯಾರ್ಥಿ ವೀಸಾಗಳಲ್ಲಿ ಒಂದು ಭಾರತಕ್ಕೆ ನೀಡಲಾಗಿದೆ. ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚು ವಿದ್ಯಾರ್ಥಿಗಳ ಸಂದರ್ಶನ ಮಾಡುತ್ತೇವೆಎಂದು ಹೇಳಿದರು.