ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆಯ ಭಕ್ತರಿಗೆ ಇನ್ನಷ್ಟು ಸೌಲಭ್ಯ ನೀಡಲು ತಿರುವಿತಾಂಕುರ್ ದೇವಸ್ವಂ ಬೋರ್ಡ್ ಸಿದ್ಧತೆ ನಡೆಸುತ್ತಿದೆ.
ಮುಂದಿನ ಯಾತ್ರಾ ಋತುವಿನಲ್ಲಿ ಜನಸಂದಣಿ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಬೋರ್ಡ್ ಅಧ್ಯಕ್ಷ ಕೆ. ಜಯಕುಮಾರ್ ತಿಳಿಸಿದ್ದಾರೆ.
ಟಿಡಿಬಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾತ್ರೆಗೆ ಮುನ್ನವೇ ಅಗತ್ಯ ಪೂರ್ವಸಿದ್ಧತೆಗಳು ಆರಂಭಗೊಂಡಿದ್ದು, ಹಲವು ಸೇವೆಗಳು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಶಬರಿಮಲೆಯ ವಿವಿಧ ವ್ಯವಸ್ಥೆಗಳನ್ನು ಸಂಪೂರ್ಣ ಡಿಜಿಟಲ್ ಮಾದರಿಗೆ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ. ನಗದು ವಹಿವಾಟುಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ಆನ್‌ಲೈನ್ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತದೆ. ಇದು ಹಣಕಾಸು ವ್ಯವಹಾರಗಳಿಗೆ ಮಾತ್ರ ಸೀಮಿತವಾಗದೆ ಆಡಳಿತಾತ್ಮಕ ಸೇವೆಗಳಿಗೂ ವಿಸ್ತರಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಜನಸಂದಣಿ ನಿರ್ವಹಣೆಗೆ ಸಂಬಂಧಿಸಿದಂತೆ ಜೂನ್ 20ರಂದು ಕೊಚ್ಚಿಯಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದ್ದು, ದೇಶದ ಪ್ರಮುಖ ಎಐ ತಜ್ಞರು ಇದರಲ್ಲಿ ಭಾಗವಹಿಸಲಿದ್ದಾರೆ. ನಿಲಕ್ಕಲ್, ಪಂಪಾ, ಮರಕೂಟಂ ಮತ್ತು ಸನ್ನಿಧಾನಂ ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ ಯಾತ್ರಿಕರ ಸಂಖ್ಯೆಯನ್ನು ಎಐ ತಂತ್ರಜ್ಞಾನದ ಮೂಲಕ ನೈಜ ಸಮಯದಲ್ಲಿ ವಿಶ್ಲೇಷಿಸಿ, ಅದರ ಆಧಾರದ ಮೇಲೆ ಜನಸಂದಣಿ ನಿಯಂತ್ರಣ ವ್ಯವಸ್ಥೆ ರೂಪಿಸುವ ಗುರಿ ಹೊಂದಲಾಗಿದೆ ಎಂದು ಅವರು ವಿವರಿಸಿದ್ದಾರೆ. ಯಾತ್ರಿಕರ ಸಂಖ್ಯೆ ಬಗ್ಗೆ ಕ್ಷಣಕ್ಷಣದ ಮಾಹಿತಿ ಲಭ್ಯವಾಗುವುದರಿಂದ, ಯಾವ ಸಮಯದಲ್ಲಿ ಎಷ್ಟು ಮಂದಿಗೆ ಮುಂದುವರಿಯಲು ಅವಕಾಶ ನೀಡಬೇಕು ಎಂಬ ನಿರ್ಧಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ಕೈಗೊಳ್ಳಲು ಇದರಿಂದ ಸಾಧ್ಯವಾಗಲಿದೆ. ಜೊತೆಗೆ ಇದು ಯಾತ್ರಿಕರ ಸುರಕ್ಷತೆ ಮತ್ತು ಸುಗಮ ದರ್ಶನ ವ್ಯವಸ್ಥೆಗೆ ಕೂಡಾ ನೆರವಾಗಲಿದೆ ಎಂದು ಟಿಡಿಬಿ ವಿಶ್ವಾಸ ವ್ಯಕ್ತಪಡಿಸಿದೆ.



