ಹೊಸದಿಗಂತ, ಮಂಗಳೂರು:
ಮಾತು ಮಾತಿಗೆ ಸಂವಿಧಾನದ ಹೆಸರು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಇತ್ತೀಚೆಗೆ ಸಂವಿಧಾನದ ಬಗ್ಗೆ ಸಮಾವೇಶ ಏರ್ಪಡಿಸಿ ಮೋದಿ ನಿಂದನೆಗೆ ಸರ್ಕಾರಿ ಕಾರ್ಯಕ್ರಮ ಬಳಸಿದ್ದಾರೆ. ಕೇಂದ್ರ ಸರಕಾರವನ್ನು ದೂಷಣೆ ಮಾಡಲು ಜನರ ತೆರಿಗೆ ಹಣ ಖರ್ಚು ಮಾಡಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ಧಿಕ್ಕರಿಸಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ ಅವರಂತಹ ಹಿರಿಯ ನಾಯಕರನ್ನು ಜೈಲಿಗೆ ಹಾಕಿದ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನಕ್ಕೆ ಧಕ್ಕೆಯಾಗಿದೆ ಎಂದು ಹೇಳುವ ಹಕ್ಕಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಮಶಾನ ನಿರ್ಮಾಣಕ್ಕೆ ಕಾಂಗ್ರೆಸ್ ಹೊಸದಿಲ್ಲಿಯಲ್ಲಿ 10 ಅಡಿ ಜಾಗ ನೀಡಲಿಲ್ಲ.
ರಾಜಕೀಯ ಬೇಳೆ ಬೇಯಿಸಲು ಅಂಬೇಡ್ಕರ್ ಅವರ ಹೆಸರು ಬಳಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಂವಿಧಾನ, ಸ್ವಾತಂತ್ರ್ಯದ ಹೆಸರಿನಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯರು ಕೂಡ ಸಂವಿಧಾನಕ್ಕೆ ಧಕ್ಕೆಯಾಗಿದೆ ಎಂದು ಮಾತನಾಡುತ್ತಾರೆ.
ಸಂವಿಧಾನದ ತಿದ್ದುಪಡಿ ಮಾಡಿದ್ದು, ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಸಂವಿಧಾನಕ್ಕೆ ಧಕ್ಕೆ ತಂದದ್ದು ಕಾಂಗ್ರೆಸ್ ಪಕ್ಷ ಎಂದರು. ಭಾರತವನ್ನು ಒಡೆದ ಕಾಂಗ್ರೆಸಿಗರು ಇದೀಗ ಭಾರತ್ ಜೋಡೋ ಮಾಡಲು ಹೊರಟಿದ್ದಾರೆ. ಕಾಶ್ಮೀರದಲ್ಲಿ ಬದಲಾವಣೆಗೆ ನರೇಂದ್ರ ಮೋದಿಯವರೇ ಕಾರಣ. ಲೋಕಸಭಾ ಚುನಾವಣೆಯಲ್ಲಿ ಈ ಭಾರಿ ನಾವು 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ದ.ಕ.ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತೇವೆ. ರಾಜ್ಯಸಭಾ ಚುನಾವಣೆ ನಡೆಯುತ್ತಿದ್ದು ನಮ್ಮ ಅಪೇಕ್ಷೆಯಂತೆ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.