ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ್ ಜೋಡೋ ಯಾತ್ರೆ ಗಾಗಿ ಕೆಜಿಎಫ್ ಮ್ಯೂಸಿಕ್ ಬಳಕೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರೀನೇಟ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಬುಧವಾರ ನಿರಾಕರಿಸಿದೆ.
ಪ್ರಕರಣ ರದ್ದು ಮಾಡುವಂತೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು,ಈ ಮೂಲಕ ತನಿಖೆಗೆ ಕೋರ್ಟ್ ಹಸಿರು ನಿಶಾನೆ ತೋರಿದೆ.
ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಅನುಮತಿ ಇಲ್ಲದೆ ಮ್ಯೂಸಿಕ್ ಬಳಕೆ ಮೇಲ್ನೋಟಕ್ಕೆ ಕಂಡು ಬಂದಿದೆ. ಇದು ದೂರುದಾರರ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ಗಾಂಧಿ, ಎಐಸಿಸಿ ಜನರಲ್ ಸೆಕ್ರೇಟರಿ ಜೈರಾಮ್ ರಮೇಶ್ ಹಾಗೂ ಎಐಸಿಸಿ ಸೋಷಿಯಲ್ ಮೀಡಿಯಾ ಅಂಡ್ ಡಿಜಿಟಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ವಿರುದ್ದ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಕೆಜಿಎಫ್ ಚಿತ್ರದ ಮ್ಯೂಸಿಕ್ ಬಳಸಿಕೊಂಡಿರುವ ಬಗ್ಗೆ ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಯಿಂದ ಕೇಸ್ ದಾಖಲಾಗಿತ್ತು. ಎಂಆರ್‌ಟಿ ಮ್ಯೂಸಿಕ್ ಮಾಲೀಕ ನವೀನ್ ಕುಮಾರ್ ಅವರು ಅನುಮತಿ ಪಡೆಯದೇ ಕೆಜಿಎಫ್-2 ಚಿತ್ರದ ಹಾಡಿನ ಮ್ಯೂಸಿಕ್ ಬಳಕೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು.
ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಐಪಿಸಿ, ಕಾಪಿರೈಟ್ ಕಾಯಿದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿ 2022ರ ಡಿ.08ರಂದು ಎಫ್ಐಆರ್ ದಾಖಲಾಗಿತ್ತು. ಈ ಎಫ್ಐಆರ್ ರದ್ದು ಕೋರಿ ಮೂವರೂ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.