ಚುನಾವಣಾ ಸಂಬಂಧದ ಕಾರ್ಯಕ್ರಮಗಳ ಅನುಮತಿಗೆ ಬಳಸಿ ʼಸುವಿಧಾʼ ತಂತ್ರಾಂಶ

ಹೊಸದಿಗಂತ ವರದಿ ಮೈಸೂರು :

ಚುನಾವಣೆ ವೇಳೆ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲು ಮತ್ತು ಚುನಾವಣಾ ಸಂಬಂಧದ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಲು ನೆರವಾಗಲೆಂದು ಚುನಾವಣಾ ಆಯೋಗ ಸುವಿಧಾ ಮತ್ತು ಸಿ-ವಿಜಿಲ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳು ಅದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ತಿಳಿಸಿದರು.

ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣೆ ಸಂಬಂಧ ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ವಿವಿಧ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಮೆರವಣಿಗೆ, ಧ್ವನಿವರ್ಧಕ, ರ್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಅನುಮತಿಗಾಗಿ ಚುನಾವಣಾ ಆಯೋಗ ರೂಪಿಸಿರುವ “ಸುವಿಧಾ” ತಂತ್ರಾಂಶ ಬಳಸುವಂತೆ ಹೇಳಿದರು.

ಚುನಾವಣಾ ನೀತಿ ಸಂಹಿತೆ ಕುರಿತ ದೂರುಗಳನ್ನು ಸ್ವೀಕರಿಸಲು 1950 ಸಹಾಯವಾಣಿ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ನಿಷ್ಪಕ್ಷಪಾತ, ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸುವ ಗುರಿ ಇದೆ. ಚುನಾವಣೆಯಲ್ಲಿ ಮತದಾರರಿಗೆ ಆಮಿಷವೊಡ್ಡುವುದು ಹಾಗೂ ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದರು.

ಅಭ್ಯರ್ಥಿಗಳು ವಾಹನ, ಧ್ವನಿವರ್ಧಕ, ಸಭೆ, ಸಮಾರಂಭ, ರ್ಯಾಲಿ ಸೇರಿದಂತೆ ವಿವಿಧ ಅನುಮತಿ ಪಡೆಯಲು ಏಕ ಗವಾಕ್ಷಿ ವ್ಯವಸ್ಥೆ “ಸುವಿಧಾ” ತಂತ್ರಾಂಶದಲ್ಲಿ https://suvidha.eci.gov.in/suvidhaac/ public/login ಅರ್ಜಿ ಸಲ್ಲಿಸಬಹುದಾಗಿದೆ. ಅದೇ ರೀತಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಿ-ವಿಜಿಲ್ ತಂತ್ರಾಂಶದಲ್ಲಿ ದೂರು ದಾಖಲಿಸಲು ಅವಕಾಶವಿದೆ.

ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗ ಇದೀಗ ಜನಸಾಮಾನ್ಯರು ತಮಗಿರುವ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಗುಪ್ತವಾಗಿ ಹಾಗೂ ಸುಲಭವಾಗಿ ಹಂಚಿಕೊಳ್ಳಲು ಅನುಕೂಲವಾಗುವಂತೆ ಸಿ-ವಿಜಿಲ್ ತಂತ್ರಾಂಶ ಜಾರಿಗೆ ತಂದಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಬ್ಯಾನರ್, ಪೋಸ್ಟರ್​ಗಳನ್ನು ತೆರವುಗೊಳಿಸದೇ ಇರುವುದು, ಹಣ ಹಂಚಿಕೆ, ಮದ್ಯ ಹಂಚಿಕೆ, ಸೀರೆ ಅಥವಾ ಉಚಿತ ಉಡುಗೊರೆಗಳನ್ನು ನೀಡುವುದು, ಅನುಮತಿ ಪಡೆಯದೇ ಸಭೆ ಸಮಾರಂಭಗಳನ್ನು ಆಯೋಜಿಸಿರುವ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್​ನಲ್ಲಿ ಸಿ-ವಿಜಿಲ್ ಆ್ಯಪ್‌ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಛಾಯಾಚಿತ್ರ, ವಿಡಿಯೋ ಅಥವಾ ಧ್ವನಿಮುದ್ರಿತ ಕ್ಲಿಪಿಂಗ್ಸ್​ಗಳನ್ನು ಕಳುಹಿಸಬಹುದಾಗಿದೆ. ಜೊತೆಗೆ ದೂರನ್ನು ದಾಖಲಿಸಬಹುದಾಗಿರುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ರಾಜಕೀಯ ಪಕ್ಷದ ಮುಖಂಡರುಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಧಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!