ಹೊಸದಿಗಂತ ವರದಿ ಮಂಡ್ಯ:
ಆಧುನಿಕ ತಾಂತ್ರಿಕತೆಯು ನದಿ ನೀರಿನ ಪ್ರಮಾಣವನ್ನು ಕುಳಿತಲ್ಲೇ ದೊರಕಿಸುವಂತಹ ಎಲ್ಲ ನೈಪುಣ್ಯವನ್ನು ಹೊಂದಿದ್ದು, ಇದರ ಸದ್ಬಳಕೆಯಿಂದ ನಮಗೆ ಲಭ್ಯವಾಗುವ ನೀರಿನ ಪ್ರಮಾಣವನ್ನು ಮೊದಲೇ ಪಡೆದುಕೊಳ್ಳಲು ಸಾಧ್ಯವಿದೆ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಪ್ರೊ. ಬಿ. ಶಿವಲಿಂಗಯ್ಯ ಅಭಿಪ್ರಾಯಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಎಸ್.ಬಿ. ಎಜುಕೇಷನ್ ಟ್ರಸ್ಟ್, ಮಾಂಡವ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ʼಕಾವೇರಿ :ಪ್ರಕೃತಿಯ ಪ್ರಸಾದ ಮನುಷ್ಯರ ವಿವಾದʼ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಕೃತಿಯಲ್ಲಿ ಮಳೆ ನೀರು ವಾಡಿಕೆಯಷ್ಟೇ ಬೀಳುತ್ತದೆ. ಆದರೆ, ಜನಸಂಖ್ಯೆ ಹೆಚ್ಚಾದ ಪರಿಣಾಮ ನೀರಿನ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ಕುಡಿಯಲು ಕೃಷಿಗೆ, ಕೈಗಾರಿಕೆಗಳು ಸೇರಿದಂತೆ ಬಳಕೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ ಎಂದರು.
ಬೆಂಗಳೂರು ನಗರಕ್ಕೆ ಮಾತ್ರವೇ 60 ಟಿಎಂಸಿ ನೀರು ಕೊಡಿ ಎಂಬ ಬೇಡಿಕೆ ಬಂದಿದೆ. ಕೆ.ಆರ್.ಎಸ್. ಅಣೆಕಟ್ಟು ಸೇರಿದಂತೆ ಕಾವೇರಿ ಕೊಳ್ಳದಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣಕ್ಕೂ, ನೀರಿನ ಬೇಡಿಕೆಗೂ ಅಜಗಜಾಂತರ ವ್ಯತ್ಯಾಸವಾಗುತ್ತಿದೆ. ಪರಿಣಾಮ ವ್ಯವಸಾಯದಲ್ಲಿ ಬಳಸುತ್ತಿರುವ ನೀರಿನ ಪ್ರಮಾಣದಲ್ಲಿ ಶೇ. 10ರಷ್ಟು ಉಳಿಸಿ ಕುಡಿಯುವ ನೀರಿಗೆ ದೊರಕಿಸಬೇಕಾದ ಸನ್ನಿವೇಶ ಎದುರಾಗಿದೆ. ಹೀಗಾಗಿ ಇಂದು ಹನಿ ನೀರಾವರಿ ಹಳೇ ಪದ್ಧತಿಯಾಗಿದ್ದು, ಬಿಂದು ನೀರಾವರಿ ಪದ್ಧತಿ ಬರುತ್ತಿದೆ. ಇದು ನಮ್ಮ ದೇಶಕ್ಕೆ ಹೊಸದು. ಇಸ್ರೇಲ್ ದೇಶಕ್ಕೆ ಹಳೆಯದ್ದು ಎಂದು ವಿವರಿಸಿದರು.