ಹೊಸದಿಗಂತ ವರದಿ, ಮಂಡ್ಯ:
ನಮಗೆ ರಾವಣ ರಾಜ್ಯ ಬೇಡ, ರಾಮ ರಾಜ್ಯ ಬೇಕಿದೆ. ರಾಮ ರಾಜ್ಯ ಬೇಕೆಂದರೆ ರಾಮನ ತತ್ವಗಳನು ಹಾಗೂ ಗುಣಗಳನ್ನು ಅಳವಡಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ದ್ಯಾಪಸಂದ್ರ ಗ್ರಾಮಾಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಪಂಚಮುಖಿ ಗಣಪತಿ ದೇವಸ್ಥಾನ, ಶ್ರೀರಾಮ ಮಂದಿರ ಮತ್ತು ನಾಗದೇವತಾ ಪ್ರತಿಷ್ಠಾಪನಾ ಮತ್ತು ಶ್ರೀ ಕುಂಭಾಭಿಷೇಕ ಹಾಗೂ ಶ್ರೀ ಸಾಯಿಸಭಾ ಮಂಟಪ, ಹುಲಿಯೂರಮ್ಮ ದೇವರ ನಿವೇಶನದ ಕಾಂಪೌಂಡ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಊಟದ ಹಾಲ್ ಉದ್ಘಾಟನಾ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶ್ರೀ ರಾಮನಿಗೆ ಶರಣಾದರೆ ಮಾನವನ ಸಕಲ ಕಷ್ಟವು ಪರಿಹಾರವಾಗುತ್ತದೆ. ಆದ್ದರಿಂದ ಎಲ್ಲರೂ ಶ್ರೀರಾಮನಿಗೆ ಶರಣಾಗುವ ಮೂಲಕ ರಾಮ ರಾಜ್ಯವನ್ನು ಮಾಡಬೇಕಿದೆ ಎಂದು ತಿಳಿಸಿದರು.
ಸ್ವಾರ್ಥ ಬಿಟ್ಟು ದೂರದೃಷ್ಠಿ ಬೆಳೆಸಿಕೊಳ್ಳಬೇಕು. ನನಗೆ ಕೇಡಾದರೂ ಪರವಾಗಿಲ್ಲ, ಊರಿಗೆ ಒಳ್ಳೇದಾಗ ಬೇಕು ಎಂಬ ಮನೋಭಾವನೆ ಪ್ರತಿಯೊಬ್ಬರಲ್ಲಿಯೂ ಬರಬೇಕು. ದೇವರಿಗೆ ಮೊದಲು ನಮಸ್ಕಾರ ಮಾಡುವುದು ರೂಢಿಸಿಕೊಳ್ಳಬೇಕು. ರಾಮನ ಹೆಸರಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಸಮಾಜಕ್ಕೆ ಒಳಿತು ಮಾಡಬೇಕು. ಆ ಮೂಳಕ ಒಳಿತೆಂಬ ಕಾಣಿಕೆಯನ್ನು ನೀಡಬೇಕು. ಎಲ್ಲರಿಗೂ ಶುಭವಾಗಲಿ ಎಂದು ಆಶೀರ್ವದಿಸಿದರು.
ಕೆ.ಆರ್.ನಗರ ಕಾಗಿನೆಲೆ ಮಹಾಸಂಸ್ಥಾನ ಮಠದ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಸುಖವಾಗಿ ಇರಬೇಕು ಎನ್ನುವ ದೃಷ್ಟಿಯಿಂದ ದೇವತಾರಾಧನೆ ಮಾಡುತ್ತಿರುವುದು ಉತ್ತಮ ಕೆಲಸ, ಆದರೆ, ಎಲ್ಲಿದ್ದಾನೆ ದೇವರು ಎಂದು ಕೇಳುವವರೇ ಹೆಚ್ಚು, ದೇವರು ಎಲ್ಲಿದ್ದಾನೆ ಎನ್ನುವುದೇ ಸರಿಯಾಗಿ ತಿಳಿದಿಲ್ಲ, ಗುಡಿ, ಕಾಶಿ, ರಾಮೇಶ್ವರ, ಧರ್ಮಸ್ಥಳದಲ್ಲಿಲ್ಲ, ಅವನು ನಮ್ಮ ದೇಹವೆಂಬ ಗುಡಿಯಲ್ಲಿ ಹಾಗೂ ಎದೆಯಲ್ಲಿದ್ದುಕೊಂಡು ಉಸಿರಾಡಿಸುತ್ತಿದ್ದಾನೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೃದಯದಲ್ಲಿ ಸದಾ ನೆಲಸಿರುವುದು ದೇವರು, ಯಾರ ಕಣ್ಣಿಗೂ ಕಾಣಿಸುವುದಿಲ್ಲ, ದೇವರು ಎನ್ನುವುದು ಸತ್ಯ, ಧರ್ಮ, ನಿಷ್ಠೆ, ನಿಯಮದಲ್ಲಿದ್ದಾನೆ, ಇವೆಲ್ಲವನ್ನೂ ಬಿಟ್ಟು ದೇವರನ್ನು ಹುಡುಕಿಕೊಂಡು ಹೋಗುತ್ತಿದ್ದೇವೆ, ಯಾವಾಗ ದೇವರು ಸತ್ಯವಾಗಿರುತ್ತಾನೆ ಎಂದರೆ ಈ ಮಾನವ ಯಾರಿಗೂ ಕೇಡನ್ನು ಮಾಡದೇ ಇದ್ದರೆ ಅಲ್ಲೇ ದೇವರು ಇರುತ್ತಾನೆ ಎಂದು ತಿಳಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಮಾತನಾಡಿ, ಈ ನೆಲದಲ್ಲಿ ಧರ್ಮ ಮತ್ತು ಸಂಸ್ಕಾರಕ್ಕೆ ಬೆಲೆಯಿದೆ. ಧರ್ಮವನ್ನ ಎತ್ತಿ ಹಿಡಿದ ದೇಶ ನಮ್ಮದು, ರಾಮಾಯಣ, ಮಹಾಭಾರತ ಕೇಳಿದ್ದೀರಾ, ದೇವರಿಗೆ ಭಕ್ತಿಯಿಂದ ನಮಿಸುತ್ತೇವೆ, ಯಾವುದೇ ಊರಿಗೆ ಹೋದರು, ರಸ್ತೆ, ಮನೆ ಇಲ್ಲದಿದ್ದರೂ ಸಹ ದೇವಾಲಯ ಕಟ್ಟಬೇಕು ಎಂದಾಗ ಬಗಳ ಭಕ್ತಿಯಿಂದ ತನ್ನ ಕೈಲಾದ ಸಹಯಾ ಮಾಡುವ ಜನರು ಇದ್ದಾರೆ, ಸನ್ಯಾಸಿಗಳು, ಸಾಧಕರು ಹಾಗೂ ದೈವ ಸ್ವರೂಪದವರು ತಿರುಗಾಡಿದ ಸ್ಥಳವೂ ನಮ್ಮ ದೇಶದ ಹೆಮ್ಮೆಯಾಗಿದೆ ಎಂದರು.
ಶಾಸಕರಾದ ಡಿ.ಸಿ.ತಮ್ಮಣ್ಣ, ಎಂ.ಶ್ರೀನಿವಾಸ್, ಮನ್ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರು, ನಿರ್ದೇಶಕ ಯು.ಸಿ.ಶಿವಕುಮಾರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಉದ್ಯಮಿ ಡಿ.ಆರ್.ಸ್ವಾಮಿ, ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್, ಮುಖಂಡರಾದ ಪಿ.ರವಿಕುಮಾರ್‌ಗೌಡ, ಕೆ.ಕೆ.ರಾಧಾಕೃಷ್ಣ, ಡಾ.ಕೃಷ್ಣ, ಸಿದ್ದರೂಢ, ಅಮರಾವತಿ ಚಂದ್ರಶೇಖರ್, ಡಿ.ಎಸ್.ಉಮೇಶ್ ಭಾಗವಹಿಸಿದ್ದರು.