ಹೊಸದಿಗಂತ ವರದಿ ಹಾವೇರಿ :
ಜಿಲ್ಲೆಯಾದ್ಯಂತ ಸುರಿದ ಚಿತ್ತಿ ಮಳೆ ಆರಂಭದಲ್ಲೇ ಆತಂಕ ಮೂಡಿಸಿದೆ. ಶುಕ್ರವಾರ ಸಂಜೆಯಿಂದ ಧಾರಾಕಾರವಾಗಿ ಸುರಿದ ಪರಿಣಾಮ ತುಂಗಾ ಮೇಲ್ದಂಡೆ ಕಾಲುವೆ ಒಡೆದು ಹಾನಿಯುಂಟು ಮಾಡಿದೆ. ಕಳೆದರಾತ್ರಿ ಎಡಬಿಡದೇ ಸುರಿದ ಭಾರೀಮಳೆಗೆ ಹಾವೇರಿ ಸಮೀಪದ ಕನಕಾಪುರದ ಬಳಿ ತುಂಗಾ ಮೇಲ್ದಂಡೆ ಕಾಲುವೆ ಶನಿವಾರ ಬೆಳಗಿನ ಜಾವ ಒಡೆದು ಸಾವಿರಾರು ಎಕರೆ ಪ್ರದೇಶಕ್ಕೆ ನುಗ್ಗಿದೆ. ಇದರ ಪರಿಣಾಮ ಕಟಾವಿಗೆ ಬಂದಿದ್ದ ಬೆಳೆಯನ್ನು ಆಪೋಶನ ಪಡೆದಿದೆ.
ತುಂಗಾ ಮೇಲ್ದಂಡೆ ಕಾಲುವೆ 30-40ಅಡಿಗಳಷ್ಟು ಒಂದು ಬದಿಯಲ್ಲಿ ಒಡೆದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇದಕ್ಕೆ ಕಳಪೆ ಕಾಮಗಾರಿ, ಇಲ್ಲವೇ ಕಾಲುವೆ ನಿರ್ವಹಣೆಯಲ್ಲಿ ಲೋಪ ಕಾರಣ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ದಾವಿಸಿದ ಯುಟಿಪಿ ಅಧಿಕಾರಿಗಳನ್ನು ರೈತರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ತುಂಗಾ ಮೇಲ್ದಂಡೆ ಕಾಲುವೆಯ ಕಾಮಗಾರಿ ಕಳಪೆಯಾಗಿದೆ, 5 ವರ್ಷಗಳಲ್ಲಿ ಕಾಲುವೆ ಒಡೆದು, ರೈತರಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಯುಟಿಪಿ ಅಧಿಕಾರಿಗಳು ತುರ್ತಾಗಿ ಕಾಲುವೆ ದುರಸ್ತಿ ಜೊತೆಗೆ ಹಾನಿಗೀಡಾದ ರೈತರಿಗೆ ತಕ್ಷಣ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.