ಕಂಬಕ್ಕೆ ಕಟ್ಟಿ ಯೋಧನ ಮೇಲೆ ಹಲ್ಲೆ: ಉತ್ತರಪ್ರದೇಶ ಟೋಲ್ ಏಜೆನ್ಸಿಗೆ 20 ಲಕ್ಷ ದಂಡ, ಒಪ್ಪಂದ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮೀರತ್-ಕರ್ನಾಲ್ ರಾಷ್ಟ್ರೀಯ ಹೆದ್ದಾರಿ (NH-709A)ಯಲ್ಲಿರುವ ಭುನಿ ಟೋಲ್ ಪ್ಲಾಜಾದಲ್ಲಿ ಆಗಸ್ಟ್ 17ರ ರಾತ್ರಿ ಟೋಲ್ ಸಿಬ್ಬಂದಿ ಭಾರತೀಯ ಸೇನೆಯ ಯೋಧ, ಆಪರೇಷನ್ ಸಿಂಧೂರ್ ನಲ್ಲಿ ಭಾಗಿಯಾಗಿದ್ದ ಕಪಿಲ್ ಸಿಂಗ್ ಮತ್ತು ಅವರ ಸಹೋದರ ಶಿವಂ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿತ್ತು.

ಈ ಘಟನೆಯ ನಂತರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕಠಿಣ ಕ್ರಮ ಕೈಗೊಂಡು ಟೋಲ್ ಸಂಗ್ರಹ ಸಂಸ್ಥೆಯಾದ ಮೆಸರ್ಸ್ ಧರಮ್ ಸಿಂಗ್ & ಕಂಪನಿಗೆ 20 ಲಕ್ಷ ರೂ. ದಂಡ ವಿಧಿಸಿದೆ ಅಲ್ಲದೆ ಕಂಪನಿಯ ಒಪ್ಪಂದವನ್ನು ರದ್ದುಗೊಳಿಸುವ ಜೊತೆಗೆ ಭವಿಷ್ಯದಲ್ಲಿ ಟೋಲ್ ಪ್ಲಾಜಾ ಬಿಡ್ಡಿಂಗ್‌ನಲ್ಲಿ ಭಾಗವಹಿಸುವುದನ್ನು ತಡೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಮೀರತ್‌ನ ಗೋಟ್ಕಾ ಗ್ರಾಮದ ನಿವಾಸಿ ಸೇನಾ ಯೋಧ ಕಪಿಲ್ ಸಿಂಗ್, ಆಗಸ್ಟ್ 17ರ ರಾತ್ರಿ ತನ್ನ ಸೋದರಸಂಬಂಧಿ ಶಿವಂ ಜೊತೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದರು. ಅವರು ಶ್ರೀನಗರದಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಭುನಿ ಟೋಲ್ ಪ್ಲಾಜಾದಲ್ಲಿ ಉದ್ದವಾದ ಸರತಿ ಸಾಲು ಮತ್ತು ಸಮಯದ ಅಭಾವದಿಂದಾಗಿ, ಕಪಿಲ್ ಟೋಲ್ ನೌಕರರಿಗೆ ವಾಹನವನ್ನು ಬೇಗನೆ ಹೊರಗೆ ತರುವಂತೆ ಮನವಿ ಮಾಡಿದರು. ಈ ಬಗ್ಗೆ ವಾಗ್ವಾದ ತಾರಕಕ್ಕೇರಿತು. ಟೋಲ್ ಸಿಬ್ಬಂದಿ ಯೋಧನ ಮೇಲೆ ಹಲ್ಲೆ ನಡೆಸಿತ್ತು. ಸಿಬ್ಬಂದಿ ಕಪಿಲ್ ಅವರನ್ನು ಕಂಬಕ್ಕೆ ಕಟ್ಟಿ ದೊಣ್ಣೆ ಕೋಲುಗಳಿಂದ ಹೊಡೆದಿದ್ದು ಓರ್ವ ಉದ್ಯೋಗಿ ಇಟ್ಟಿಗೆ ಎತ್ತಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿದೆ.

ಈ ಸಮಯದಲ್ಲಿ, ಕಪಿಲ್ ಅವರ ಸಹೋದರ ಶಿವಂ ಅವರನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಅವರನ್ನೂ ಥಳಿಸಲಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ನಂತರ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!