ಲಾರಿ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಉತ್ತರ ಕನ್ನಡ ಜಿಲ್ಲಾ ಸಂಘ ಬೆಂಬಲ

ಹೊಸದಿಗಂತ ಕಾರವಾರ:

ಬೆಲೆ ಏರಿಕೆ ವಿರುದ್ಧ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘಗಳ ಒಕ್ಕೂಟ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಉತ್ತರಕನ್ನಡ ಜಿಲ್ಲಾ ಲಾರಿ ಮಾಲೀಕರ ಸಂಘವೂ ಬೆಂಬಲ ಸೂಚಿಸಿದೆ.

ಡೀಸೆಲ್ ಬೆಲೆ ದಿನ ಕಳೆದಂತೆ ಹೆಚ್ಚಾಗುತ್ತಲಿದೆ. ಕಚ್ಚಾ ತೈಲದ ಬೆಲೆ ಇಳಿದರೂ ಡೀಸೆಲ್ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಇಂಧನ ದರ ಹೆಚ್ಚಳವಾದಲ್ಲಿ ಸಾಗಾಣಿಕಾ ವೆಚ್ಚ ಏರುವುದರಿಂದ ಸಾಮಾನ್ಯವಾಗಿ ಅದು ತರಕಾರಿ, ಹಣ್ಣು- ಹಂಪಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಸಾರ್ವಜನಿಕ ಪ್ರಯಾಣಿಕ ವಾಹನಗಳ ಬಾಡಿಗೆ/ ಟಿಕೆಟ್ ದರವೂ ಹೆಚ್ಚಾಗುತ್ತದೆ. ಹೀಗಾಗಿ ತಕ್ಷಣವೇ ಡೀಸೆಲ್ ಬೆಲೆ ಮರುಪರಿಶೀಲನೆ ಮಾಡಿ ಕಡಿಮೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ರಾಜ್ಯದಲ್ಲಿ ಒಟ್ಟಾರೆ 18 ರಾಜ್ಯ ಹೆದ್ದಾರಿ ಟೋಲ್ ಬೂತ್ ಗಳಿವೆ. ಇವುಗಳಿಂದ ಅನಧಿಕೃತವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಚಾಲಕರಿಗೆ ಮೂಲಸೌಕರ್ಯ ಹಾಗೂ ರಸ್ತೆ ಅಪಘಾತ ತಡೆಯದೇ, ಟೋಲ್ ಬೂತ್ ಗಳಿಗೆ ಕೇವಲ ಬಣ್ಣ ಬಳಿದು, ಶುಲ್ಕ ವಸೂಲಿ ಮಾಡುತ್ತಿರುವುದು ಖಂಡನೀಯ. ಟೋಲ್ ಶುಲ್ಕವನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಲಾಗಿದೆ.

ತಮ್ಮಬೇಡಿಕೆಗಳನ್ನು ಈಡೇರಿಸುವವರೆಗೆ ಲಾರಿಗಳು ನಿಂತಲ್ಲೇ ನಿಂತು ಮಾಲಕರು ಮತ್ತು ಚಾಲಕರು ಮುಷ್ಕರ ನಡೆಸಲಿದ್ದಾರೆ. ಇದರಿಂದ ನಾಡಿನ ವ್ಯಾಪಾರ ವ್ಯವಹಾರಗಳಿಗೆ, ಸಾರ್ವಜನಿಕ ಸೇವೆಗಳಿಗೆ ಅಡೆತಡೆಯುಂಟಾದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಉತ್ತರಕನ್ನಡ ಜಿಲ್ಲಾ ಲಾರಿ ಮಾಲಕರ ಅಸೋಸಿಯೇಷನ್ ಅಧ್ಯಕ್ಷ ಮಾಧವ್ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರವಾರ ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ಸಂತೋಷ್ ನಾಯ್ಕ ಹಾಗೂ ಅಂಕೋಲಾ ಟೆಂಪೋ ಯೂನಿಯನ್ ಅಧ್ಯಕ್ಷ ಕಿಶೋರ್ ನಾಯ್ಕ ಅವರು ಈ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಎಲ್ಲಾ ಲಾರಿ, ಟೆಂಪೋ- ಟ್ಯಾಕ್ಸಿ ಮಾಲಕರು ಹಾಗೂ ಚಾಲಕರು ಮತ್ತು ಸಾರ್ವಜನಿಕರೂ ಈ ಮುಷ್ಕರಕ್ಕೆ ಬೆಂಬಲ ಸೂಚಿಸಲು ಅವರು ಈ ಮೂಲಕ ಕೋರಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!