ಹೊಸ ದಿಗಂತ ವರದಿ, ಅಂಕೋಲಾ:
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠೆ ಡಾ.ಸುಮನ್ ಪನ್ನೇಕರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದ್ಧು ಅವರ ಸ್ಥಾನಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎನ್. ವಿಷ್ಣುವರ್ಧನ್ ಅವರನ್ನು ವರ್ಗಾಯಿಸಲಾಗಿದೆ.
ಕಳೆದ ಒಂದು ವರ್ಷದಿಂದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಸುಮನ್ ಪನ್ನೇಕರ್ ಅವರನ್ನು ಬೆಂಗಳೂರು ಸಿ.ಐ.ಡಿ ಎಸ್.ಪಿ ಯಾಗಿ ವರ್ಗಾವಣೆ ಮಾಡಲಾಗಿದ್ದು ಪೊಲೀಸ್ ಗುಪ್ತಚರ ವಿಭಾಗಕ್ಕೆ ಎಸ್.ಪಿ ಯಾಗಿ ವರ್ಗಾವಣೆಗೊಂಡಿದ್ದ ವಿಷ್ಣುವರ್ಧನ್ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠರನ್ನಾಗಿ ತಕ್ಷಣದಲ್ಲಿ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ.
ಎಸ್. ಪಿ ಸುಮನ್ ಪನ್ನೇಕರ್ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಸಮರ ಸಾರಿ ಅಕ್ರಮ ದಂಧೆಕೋರರಿಗೆ ದುಸ್ವಪ್ನವಾಗಿ ಕಾಡಿದ್ದರು.
ಮಟಕಾ, ಅಕ್ರಮ ಸರಾಯಿ ಮಾರಾಟ, ಗಾಂಜಾ ಸಾಗಾಟಗಾರರ ಹಿಂದೆ ಬಿದ್ದು ಬಿಸಿ ಮುಟ್ಟಿಸಿದ್ಧರು.
ಕೆಲವು ದಿನಗಳ ಹಿಂದೆಯೇ ಎಸ್. ಪಿ ಸುಮನ್ ವರ್ಗಾವಣೆ ಕುರಿತು ಮಾತುಗಳು ಕೇಳಿ ಬಂದಿತ್ತಲ್ಲದೇ ಹಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದ್ದವು.
ಅಂಕೋಲಾದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತ ಸುಕ್ರಿ ಬೊಮ್ಮ ಗೌಡ ಮತ್ತು ತುಳಸಿ ಗೌಡ ಅವರು ಎಸ್. ಪಿ ಸುಮನ್ ಪನ್ನೇಕರ್ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡದಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಇದೀಗ ಡಾ.ಸುಮನ್ ಪನ್ನೇಕರ್ ವರ್ಗಾವಣೆ ಅಧಿಕೃತವಾಗಿ ಖಚಿತಗೊಂಡಿದೆ.