March 11, 2026
Wednesday, March 11, 2026
spot_img

ಕಾಲುಸಂಕ ನಿರ್ಮಾಣದಲ್ಲಿ ಉತ್ತರ ಕನ್ನಡ ಅಗ್ರಸ್ಥಾನ: ಸಚಿವ ಸತೀಶ ಜಾರಕಿಹೊಳಿ

ಹೊಸದಿಗಂತ ವರದಿ,ಕುಮಟಾ :

ತಾಲೂಕಿನ ಹೆಗಡೆಯಲ್ಲಿ ಅಘನಾಶಿನಿ ನದಿಗೆ ನಬಾರ್ಡ್ ಯೋಜನೆಯಡಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿಯನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸೋಮವಾರ ಪರಿಶೀಲಿಸಿದರು.

ಬಳಿಕ ಕಲಭಾಗದ ಊರಕೇರಿ ರಸ್ತೆಯ ಮೂವತ್ತುಗುಂಡಿ ಸೇತುವೆ ಪುನರ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಲುಸಂಕ ಮತ್ತು ಸೇತುವೆಗಳ ನಿರ್ಮಾಣ ಕುರಿತು ಮಾತನಾಡಿದ ಜಾರಕಿಹೊಳಿ ಅವರು, “ಈ ಹಿಂದೆ ಯಾವ ಸರ್ಕಾರವೂ ಕಾಲುಸಂಕಗಳಿಗೆ ಇಷ್ಟು ಅನುದಾನ ನೀಡಿಲ್ಲ. ಈ ಬಾರಿ ಸುಮಾರು 120 ಸೇತುವೆಗಳನ್ನು ಮಂಜೂರು ಮಾಡಿದ್ದೇವೆ. ಇನ್ನೂ ಅಗತ್ಯವಿದ್ದರೆ ನೀಡುತ್ತೇವೆ,” ಎಂದು ಹೇಳಿದರು. ಜಿಲ್ಲೆಯಲ್ಲಿ ಕಾಲುಸಂಕ ನಿರ್ಮಾಣದಲ್ಲಿ ಉತ್ತರ ಕನ್ನಡವೇ ಅಗ್ರಸ್ಥಾನದಲ್ಲಿದೆ ಎಂದರು.

ಲೋಕೋಪಯೋಗಿ ಇಲಾಖೆಯ ರಸ್ತೆಗಳ ಪಕ್ಕದ ಅತಿಕ್ರಮಣ ಕುರಿತು ಈಗಾಗಲೇ ಸರ್ವೆ ಕಾರ್ಯಕ್ಕೆ ಆದೇಶ ನೀಡಿದ್ದು, ಗಡಿ ಗುರುತು ಮಾಡಿ ಪಿಲ್ಲರ್ ಅಳವಡಿಸಲಾಗುತ್ತದೆ ಎಂದು ತಿಳಿಸಿದರು. ಹಳ್ಳಿಗಳಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯ ಪ್ರಕರಣಗಳ ಕುರಿತು, “ಜನರಲ್ಲಿ ಸಮಾನತೆ ಬಗ್ಗೆ ಜಾಗೃತಿ ಮೂಡಬೇಕು. ಸಂಬಂಧಿತ ಕಾನೂನುಗಳೂ ಇವೆ,” ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ, ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿನಾಥ ಗಾಂವಕರ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !