ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡ್ ನಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.
11 ಮೇಯರ್ ಸ್ಥಾನಗಳ ಪೈಕಿ 10 ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಈ ಮೂಲಕ ಬಿಜೆಪಿ ಮುನ್ಸಿಪಲ್ ಕೌನ್ಸಿಲ್ ಹಾಗೂ ನಗರ ಪಂಚಾಯತ್ ಗಳಲ್ಲಿ ಬಿಜೆಪಿ ಪ್ರಬಲ ಪಕ್ಷವಾಗಿ ಹೊರಹೊಮ್ಮಿದೆ.
ಒಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಜಯ ಗಳಿಸಿದ್ದಾರೆ ಎಂದು ರಾಜ್ಯ ಚುನಾವಣಾ ಆಯುಕ್ತ ಸುಶೀಲ್ ಕುಮಾರ್ ಹೇಳಿದ್ದಾರೆ.
ಗುರುವಾರ 11 ಪುರಸಭೆ ನಿಗಮಗಳು, 43 ಪುರಸಭೆ ಮಂಡಳಿಗಳು ಮತ್ತು 46 ನಗರ ಪಂಚಾಯತ್‌ಗಳಿಗೆ ಮತದಾನ ನಡೆದಿದ್ದು, ಶೇ. 65.4 ರಷ್ಟು ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. 11 ಮೇಯರ್ ಹುದ್ದೆಗಳಿಗೆ 72 ಅಭ್ಯರ್ಥಿಗಳು, ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ 445 ಮತ್ತು ಪುರಸಭೆಯ ಕೌನ್ಸಿಲರ್‌ಗಳು ಮತ್ತು ಸದಸ್ಯರಿಗೆ 4,888 ಅಭ್ಯರ್ಥಿಗಳು ಸೇರಿದಂತೆ ಒಟ್ಟು 5,405 ಅಭ್ಯರ್ಥಿಗಳು ಕಣದಲ್ಲಿದ್ದರು.
ಡೆಹ್ರಾಡೂನ್ (ಸೌರಭ್ ಥಪ್ಲಿಯಾಲ್), ಋಷಿಕೇಶ್ (ಶಂಭು ಪಾಸ್ವಾನ್), ಕಾಶಿಪುರ (ದೀಪಕ್ ಬಾಲಿ), ಹರಿದ್ವಾರ (ಕಿರಣ್ ಜೈಸ್ದಲ್), ರೂರ್ಕಿ (ಅನಿತಾ ದೇವಿ), ಕೋಟ್ದ್ವಾರ (ಶೈಲೇಂದ್ರ ರಾವತ್), ರುದ್ರಪುರ (ವಿಕಾಸ್ ಶರ್ಮಾ), ಅಲ್ಮೋರಾ (ಅಜಯ್ ವರ್ಮಾ), ಪಿಥೋರಗಢ (ಕಲ್ಪನಾ ದೇವಲಾಲ್), ಮತ್ತು ಹಲ್ದ್ವಾನಿ (ಗಜರಾಜ್ ಬಿಶ್ತ್) ಬಿಜೆಪಿ ಗೆದ್ದ ಮೇಯರ್ ಸ್ಥಾನಗಳಾಗಿವೆ. ಸ್ವತಂತ್ರ ಅಭ್ಯರ್ಥಿ ಆರತಿ ಭಂಡಾರಿ ಪೌರಿ ಜಿಲ್ಲೆಯ ಶ್ರೀನಗರ ಮೇಯರ್ ಸ್ಥಾನವನ್ನು ಗೆದ್ದಿದ್ದಾರೆ ಎಂದು ಕುಮಾರ್ ಹೇಳಿದರು.
2018 ರಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎರಡು ಮೇಯರ್ ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್, ಈ ಬಾರಿ ಶೂನ್ಯ ಸಂಪಾದನೆ ಮಾಡಿದೆ.