ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಸೇತುವೆ ಕುಸಿತ ದುರಂತದಲ್ಲಿ ಇನ್ನೂ ಎರಡು ಶವಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 15 ಕ್ಕೆ ಏರಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪದ್ರಾ ಪಟ್ಟಣದ ಬಳಿಯ ಗಂಭೀರಾ ಗ್ರಾಮದ ಬಳಿ ನಾಲ್ಕು ದಶಕಗಳಷ್ಟು ಹಳೆಯದಾದ ಸೇತುವೆಯ ಒಂದು ಭಾಗ ಬುಧವಾರ ಬೆಳಿಗ್ಗೆ ಕುಸಿತ ಕಂಡಿತ್ತು. ಈ ವೇಳೆ ಹಲವು ವಾಹನಗಳು ಸೇತುವೆ ಮೇಲೆ ಸಂಚರಿಸುತ್ತಿದ್ದವು. ಆಗ ಇದ್ದಕ್ಕಿದ್ದಂತೆ ಸೇತುವೆಯ ಒಂದು ಭಾಗ ದಿಢೀರ್ ಕುಸಿದಿತ್ತು ಪರಿಣಾಮ ಹಲವಾರು ವಾಹನಗಳು ಮಹಿಸಾಗರ್ ನದಿಗೆ ಬಿದ್ದಿದ್ದವು.
ಬುಧವಾರ ರಾತ್ರಿ ನದಿಯಿಂದ ಇನ್ನೂ ಎರಡು ಶವಗಳು ಪತ್ತೆಯಾಗುವುದರೊಂದಿಗೆ, ಸೇತುವೆ ಕುಸಿತ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 15 ಕ್ಕೆ ತಲುಪಿದೆ. ಘಟನೆಯಲ್ಲಿ ಗಾಯಗೊಂಡ ಐದು ಜನರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ವಡೋದರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಆನಂದ್ ಮಾಹಿತಿ ಒದಗಿಸಿದ್ದಾರೆ.
ರಾತ್ರಿ ಪತ್ತೆಯಾಗಿರುವ ಇಬ್ಬರು ಮೃತದೇಹಗಳನ್ನು ಮೆಹ್ರಾಮ್ ಹಥಿಯಾ (51) ಮತ್ತು ವಿಷ್ಣು ರಾವಲ್ (27) ಎಂದು ಗುರುತಿಸಲಾಗಿದೆ. ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ಪ್ರದೇಶಕ್ಕೆ ಗಂಭೀರ – ಮುಜ್‌ಪುರ ಸೇತುವೆ ಸಂಪರ್ಕ ಕಲ್ಪಿಸುತ್ತದೆ. ನಿನ್ನೆ ಬೆಳಗ್ಗೆ ಈ ಸೇತುವೆ ಕುಸಿದಿದ್ದರಿಂದ ಅಲ್ಲಿ ಸಂಚರಿಸುತ್ತಿದ್ದ ವಾಹನಗಳು ನದಿಗೆ ಉರುಳಿದ್ದವು. ಘಟನೆಯಲ್ಲಿ ಹಲವರು ಗಾಯಗೊಂಡರೆ, 15ಕ್ಕೂ ಹೆಚ್ಚು ಮಂದಿ ಮೃತಪಟ್ಟರು. ಇನ್ನು ಗಾಯಗೊಂಡ ಒಂಬತ್ತು ಜನರಲ್ಲಿ ಐವರನ್ನು ವಡೋದರಾದ ಎಸ್‌ಎಸ್‌ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್ಪಿ ಆನಂದ್ ಹೇಳಿದ್ದಾರೆ
ಉನ್ನತ ಮಟ್ಟದ ತನಿಖೆ ನಡೆಸಲು ರಸ್ತೆ ಮತ್ತು ಕಟ್ಟಡ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡ ಗುರುವಾರ ಮುಂಜಾನೆ ಇಲ್ಲಿಗೆ ಆಗಮಿಸಿದೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿದೆ. ಎನ್‌ಡಿಆರ್‌ಎಫ್ ಮತ್ತು ಇತರ ಏಜೆನ್ಸಿಗಳು ನದಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿವೆ.