Wednesday, December 24, 2025

ವಿಜಯ ಹಝಾರೆ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಆರ್ಭಟ: ವಿಶ್ವ ದಾಖಲೆಯ ಶತಕ ಸಿಡಿಸಿದ 14ರ ಪೋರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇವಲ 14ನೇ ವಯಸ್ಸಿನಲ್ಲಿ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸುತ್ತಿರುವ ವೈಭವ್ ಸೂರ್ಯವಂಶಿ, ವಿಜಯ ಹಝಾರೆ ಟೂರ್ನಿಯಲ್ಲಿ ಮತ್ತೊಂದು ಮಹತ್ವದ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ರಾಂಚಿಯಲ್ಲಿ ನಡೆದ ಪ್ಲೇಟ್ ಪಂದ್ಯದಲ್ಲಿ ಅರುಣಾಚಲ ಪ್ರದೇಶ್ ವಿರುದ್ಧ ಬಿಹಾರ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್, ಅತಿವೇಗದ ಶತಕದೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.

ಪಂದ್ಯ ಆರಂಭದಿಂದಲೇ ಆತ್ಮವಿಶ್ವಾಸದಿಂದ ಆಡಿದ ವೈಭವ್, ಎದುರಾಳಿ ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡಲಿಲ್ಲ. ಕೇವಲ 36 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಶತಕದ ಬಳಿಕವೂ ಆಕ್ರಮಣಕಾರಿ ಆಟವನ್ನು ಮುಂದುವರಿಸಿದರು. 54 ಎಸೆತಗಳಲ್ಲಿ 150 ರನ್ ಗಳಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತೀವೇಗವಾಗಿ ಈ ಮೈಲಿಗಲ್ಲು ತಲುಪಿದ ಆಟಗಾರ ಎಂಬ ದಾಖಲೆ ನಿರ್ಮಿಸಿದರು.

ಈ ಹಿಂದೆ ಈ ದಾಖಲೆ ದಕ್ಷಿಣ ಆಫ್ರಿಕಾದ ದಿಗ್ಗಜ ಬ್ಯಾಟರ್ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿದ್ದು, ಅವರು 64 ಎಸೆತಗಳಲ್ಲಿ 150 ರನ್ ಗಳಿಸಿದ್ದರು. ಅಂತಿಮವಾಗಿ ವೈಭವ್ 84 ಎಸೆತಗಳಲ್ಲಿ 190 ರನ್ ಗಳಿಸಿ ಔಟಾದರು. ಅವರ ಇನಿಂಗ್ಸ್‌ನಲ್ಲಿ 15 ಸಿಕ್ಸ್ ಹಾಗೂ 16 ಫೋರ್‌ಗಳು ಸೇರಿದ್ದವು. ದ್ವಿಶತಕ ಕೇವಲ 10 ರನ್ ದೂರದಲ್ಲಿ ತಪ್ಪಿಸಿಕೊಂಡರೂ, ಈ ಇನಿಂಗ್ಸ್ ಬಿಹಾರ ತಂಡವನ್ನು 28 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 267 ರನ್ ಗಳಿಸುವ ಹಂತಕ್ಕೆ ಕರೆದೊಯ್ದಿತು. ಐಪಿಎಲ್ ಮತ್ತು ಭಾರತ ಎ ತಂಡದ ಬಳಿಕ, ದೇಶೀಯ ಕ್ರಿಕೆಟ್‌ನಲ್ಲೂ ವೈಭವ್ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

error: Content is protected !!