Friday, January 9, 2026

ಮೋಡಿ ಮಾಡಿತು ವೈಭವ್ ಕ್ಯಾಪ್ಟನ್ಸಿ: ಆಫ್ರಿಕಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಅಂಡರ್-19 ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತ ಆತಿಥೇಯರನ್ನು 233 ರನ್​​ಗಳಿಂದ ಏಕಪಕ್ಷೀಯವಾಗಿ ಸೋಲಿಸಿ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿತು. ಇದರೊಂದಿಗೆ ನಾಯಕನಾಗಿ ಮೊಟ್ಟ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಿದ್ದ ವೈಭವ್ ಸೂರ್ಯವಂಶಿಗೆ ಉತ್ತಮ ಗೆಲುವು ಸಿಕ್ಕಿದೆ.

ಇಡೀ ಸರಣಿಯಲ್ಲಿ ಆಟಗಾರನಾಗಿ ಮಾತ್ರವಲ್ಲದೆ ನಾಯಕತ್ವದಲ್ಲೂ ಮಿಂಚಿದ ವೈಭವ್ ಸೂರ್ಯವಂಶಿ ಅತಿ ಕಿರಿಯ ವಯಸ್ಸಿಗೆ ಕ್ಲೀನ್ ಸ್ವೀಪ್ ಮಾಡಿದ ನಾಯಕ ಎಂಬ ದಾಖಲೆಯನ್ನು ಬರೆದಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 393 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕರಾದ ವೈಭವ್ ಸೂರ್ಯವಂಶಿ ಮತ್ತು ಆರನ್ ಜಾರ್ಜ್ ಅದ್ಭುತ ಶತಕ ಬಾರಿಸಿದರು. ನಾಯಕ ವೈಭವ್ 127 ರನ್‌ಗಳ ಆಕ್ರಮಣಕಾರಿ ಇನ್ನಿಂಗ್ಸ್ ಆಡಿದರೆ, ಆರನ್ 118 ರನ್‌ಗಳ ಕೊಡುಗೆ ನೀಡಿದರು. ಇವರಿಬ್ಬರು ಜೊತೆಯಾಗಿ ತಂಡವನ್ನು ದ್ವಿಶತಕದ ಗಡಿ ದಾಟಿಸಿದರು.

394 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ಅಂಡರ್-19 ತಂಡವು ಭಾರತೀಯ ಬೌಲರ್‌ಗಳ ವಿರುದ್ಧ ಸಂಪೂರ್ಣವಾಗಿ ಅಸಹಾಯಕವಾಗಿ ಕಾಣಿಸಿಕೊಂಡಿತು. ಭಾರತದ ಪರ ಮಾರಕ ಬೌಲಿಂಗ್ ಮಾಡಿದ ಕಿಶನ್ ಸಿಂಗ್, ಆಫ್ರಿಕಾಕ್ಕೆ ಆರಂಭಿಕ ಆಘಾತ ನೀಡಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡವು 35 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟ್ ಆಯಿತು.

error: Content is protected !!