ವಾಲ್ಮೀಕಿ ಅಭಿವೃದ್ದಿ ನಿಗಮದ ಬಹುಕೋಟಿ ಹಗರಣ, ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ದಿಗಂತ ವರದಿ ಬಳ್ಳಾರಿ:

ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದ 187 ಕೋಟಿ ರೂ.ಹಗರಣಕ್ಕೆ ಸಂಬಂಧಿಸಿದಂತೆ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಬಿ.ಶ್ರೀರಾಮುಲು ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾನಾ ಕಡೆಯಿಂದ ಆಗಮಿಸಿದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೈಯಲ್ಲಿ ಖಾಲಿ ಚಂಬು ಹಿಡಿದು, ಕಪ್ಪು ಪಟ್ಟಿ ಧರಿಸಿದ ಪ್ರತಿಭಟನಾಕಾರರು, ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿ ದೇಗುಲದಿoದ ರಾಯಲ್ ವೃತ್ತದವರೆಗೆ ಮೆರವಣಿಗೆ ನಡೆಸಿದರು. ನಂತರ ಡಿಸಿ ಕಚೇರಿಗೆ ತೆರಳಿ ಕೂಡಲೇ ಸಿ.ಎಂ.ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಡಿಸಿ ಕಚೇರಿಗೆ ಮುತ್ತಗಿ ಹಾಕಲು ಮುಂದಾಗುತ್ತಿದ್ದಂತೆ ಸ್ಥಳದಲ್ಲಿದ್ದ ಪೋಲೀಸ್ ರು ಬ್ಯಾರಿಕೇಡ್ ಹಾಕಿ ತಡೆಹಿಡಿದರು. ಎಲ್ಲೆಲ್ಲೂ ಬಿಜೆಪಿ ಬಾವುಟ ರಾರಾಜಿಸಿದವು. ಈ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರು ಮಾತನಾಡಿ, ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದ 187 ಕೋಟಿ ರೂ.ಹಗರಣಕ್ಕೆ ಸಂಬಂಧಿಸಿದಂತೆ ಕೂಡಲೇ ನೈತಿಕ ಹೊಣೆ ಹೊತ್ತು, ಸಿ.ಎಂ.ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು, ಈ ಹಗರಣಕ್ಕೆ ಸಂಬಂಧಿಸಿದಂತೆ ಜಿಲ್ಲೆ ಹಾಗೂ ರಾಜ್ಯದ ನಾಯಕರು ಬೀದಿಗಿಳಿದು ಹೋರಾಟ ನಡೆಸಿದ ಹಿನ್ನೆಲೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದು, ನವರ ತಲೆದಂಡವಾದರೆ ಸಾಲದು, ಈ ಹಗರಣದ ಕಿಂಗ್ ಪಿನ್ ಯಾರು ಎಂಬುದು ಬಯಲಾಗಬೇಕು, ಆತ್ಮಹತ್ಯೆ ಮಾಡಿಕೊಂಡ ಕಚೇರಿ ಅಧೀಕ್ಷಕ ಚಂದ್ರಶೇಖರ ಕುಟುಂಬಕ್ಕೆ ನ್ಯಾಯ ಸಿಗಬೇಕು, ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಅನುಮಾನವಿದೆ, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಕೇವಲ ಭ್ರಷ್ಟಾಚಾರ ಅಲ್ಲ ಇದು, ಬುಡಕಟ್ಟು ಸಮುದಾಯಗಳ ಹಣವನ್ನು ಕಳ್ಳತನ ಮಾಡಿದ ಸರ್ಕಾರವಿದು, ಇದರ ಕಿಂಗ್ ಪಿನ್ ಯಾರು ಎಂಬುದು ತನಿಖೆಯಾಗಬೇಕು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!