ಹೊಸದಿಗಂತ ವರದಿ ಬಳ್ಳಾರಿ:
ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳ ತಂಡ ಬೆಳ್ಳಂ ಬೆಳಿಗ್ಗೆ ಸoಸದ ಈ.ತುಕಾರಾಂ, ಬಳ್ಳಾರಿ ನಗರ ಶಾಸಕ ನಾರಾ ಭರತ್ ಹಾಗೂ ಕಂಪ್ಲಿ ಶಾಸಕ ಜೇ.ಎನ್.ಗಣೇಶ್ ಹಾಗೂ ಆಪ್ತ ಸಹಾಯಕ ಗೋವರ್ಧನ್ ಅವರ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆಗೆ ಮುಂದಾಗಿದ್ದಾರೆ.
ಸoಸದ ಈ.ತುಕಾರಾಂ ಅವರ ಸಂಡೂರಿನ ನಿವಾಸ, ಕಚೇರಿ, ಶಾಸಕ ಜೇ.ಎನ್.ಗಣೇಶ್ ಅವರ ಕಂಪ್ಲಿ ನಿವಾಸ, ಶಾಸಕ ನಾರಾ ಭರತ್ ರೆಡ್ಡಿ ಅವರ ಬಳ್ಳಾರಿಯ ನಿವಾಸ ಸೇರಿದಂತೆ ಗ್ರಾಮೀಣ ಶಾಸಕ ನಾಗೇಂದ್ರ ಅವರ ಆಪ್ತ ಸಹಾಯಕ ಗೋವರ್ಧನ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳ ತಂಡ ಏಕ ಕಾಲಕ್ಕೆ ದಾಳಿ ನಡೆಸಿ, ಶಾಕ್ ನೀಡಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ಬಳಕೆ ಆರೋಪ ಆಧರಿಸಿ, ಇಡಿ ಅಧಿಕಾರಿಗಳ ತಂಡ, ತನಿಖೆ ಚುರುಕುಗೊಳಿಸಿದೆ. ಸoಸದ ಈ.ತುಕಾರಾಂ ಅವರ ನಿವಾಸಕ್ಕೆ ಬೆಳ್ಳಂ ಬೆಳಿಗ್ಗೆ 14 ಅಧಿಕಾರಿಗಳ ತಂಡ ಬಾಗಿಲು ಬಡಿಯುತ್ತಿದ್ದಂತೆ ಶಾಕ್ ಒಳಗಾದರು. ಕಳೆದ 3 ಗಂಟೆಯಿಂದಲೂ ಅಧಿಕಾರಿಗಳ ತಂಡ ಶೋಧ ಮುಂದುವರೆಸಿದೆ. ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ಬೆಂಗಳೂರಿನ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆಗೆ ಮುಂದಾಗಿದ್ದಾರೆ.