ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಿಂದ ಡೆಹ್ರಾಡೂನ್‌ಗೆ ಹೋಗುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಅಪರಿಚಿತ ವ್ಯಕ್ತಿಗಳು ರೈಲಿಗೆ ಕಲ್ಲು ಎಸೆದಿದ್ದು, ಭಾನುವಾರ ರಾತ್ರಿ ಉತ್ತರ ಪ್ರದೇಶ ರಾಜ್ಯದ ಮುಜಾಫರ್‌ನಗರ ಠಾಣೆ ಬಳಿ ಈ ಘಟನೆ ನಡೆದಿದೆ. ಕೋಚ್ ಇ-1 ಸೀಟ್ ಸಂಖ್ಯೆ 13-14ರಲ್ಲಿ ದಾಳಿ ನಡೆದಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಕಲ್ಲು ದಾಳಿಯಿಂದ ರೈಲಿನ ಕನ್ನಡಿಗಳಿಗೆ ಸ್ವಲ್ಪ ಹಾನಿಯಾಗಿದೆ. ರೈಲಿನಲ್ಲಿದ್ದ ಕೆಲ ಪ್ರಯಾಣಿಕರು ಇದನ್ನು ವಿಡಿಯೋ ಮಾಡಿದ್ದಾರೆ. ಇದೇ ವೇಳೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಯಲಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಮೇ 29 ರಂದು ಡೆಹ್ರಾಡೂನ್‌ನಿಂದ ದೆಹಲಿಯ ಆನಂದ್ ವಿಹಾರ್ ನಿಲ್ದಾಣಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಪ್ರಧಾನಿ ಮೋದಿ ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಾರಂಭಿಸುತ್ತಿದ್ದಾರೆ. ಆದರೆ, ಆ ಪ್ರದೇಶಗಳಲ್ಲಿ ಅಪರಿಚಿತ ದುಷ್ಕರ್ಮಿಗಳು ಈ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಈ ಹಿಂದೆಯೂ ವಿವಿಧ ರಾಜ್ಯಗಳಲ್ಲಿ ಇಂತಹ ಘಟನೆಗಳು ಬೆಳಕಿಗೆ ಬಂದಿದ್ದವು. ಕಳೆದ ಆರು ತಿಂಗಳಲ್ಲಿ ಕೇರಳ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ.
ರೈಲ್ವೇ ಕಾಯಿದೆಯಡಿ ರೈಲುಗಳ ಮೇಲೆ ಕಲ್ಲು ತೂರಾಟ ಅಪರಾಧ. ಆರೋಪ ಸಾಬೀತಾದರೆ, ಆರೋಪಿಗೆ ಹತ್ತು ವರ್ಷ ಜೈಲು ಶಿಕ್ಷೆ ಅನುಭವಿಸುವ ಪರಿಸ್ಥಿತಿಯೂ ಇದೆ. ಇಂತಹ ಘಟನೆಗಳು ನಡೆಯದಂತೆ ತಡೆಯಲು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಮತ್ತು ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಹಲವು ಕ್ರಮಗಳನ್ನು ಕೈಗೊಂಡಿದೆ.