ಹೊಸದಿಗಂತ ವರದಿ,ಹಾವೇರಿ :
ಧಾರವಾಡ-ಬೆಂಗಳೂರ ನಗರಗಳ ನಡುವೆ ಹಾವೇರಿ ಮಾರ್ಗದಲ್ಲಿ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ವರ್ಚುವಲ್ ಮೂಲಕ ದೆಹಲಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು.
ಮಂಗಳವಾರ ಬೆಳಿಗ್ಗೆ ಧಾರವಾಡದಿಂದ ಸಂಚಾರ ಆರಂಭಿಸಿ ಮಧ್ಯಾಹ್ನ ೧೨.೩೦ಕ್ಕೆ ಹಾವೇರಿ ನಿಲ್ದಾಣಕ್ಕೆ ಆಗಮಿಸಿದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಸಂಚಾರ ಆರಂಭ ವರ್ಚುವಲ್ ಕಾರ್ಯಕ್ರಮದ ವಿಕ್ಷಣೆಗೆ ಹಾವೇರಿ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಹಾವೇರಿ ನಿಲ್ದಾಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೈಸೂರು ವಿಭಾಗದ ರೈಲ್ವೆ ಅಧಿಕಾರಿ ರವಿಚಂದ್ರನ್ ಮಾತನಾಡಿ, ಗಂಟೆಗೆ ೧೨೦ ಕಿ.ಮೀ. ವೇಗದಲ್ಲಿ ವಂದೇ ಭಾರತ್ ರೈಲು ಸಂಚರಿಸಲಿದೆ. ಈ ಭಾಗದ ಟ್ರ್ಯಾಕ್ ೧೧೦ ವೇಗಕ್ಕೆ ಸಿದ್ಧಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ೧೩೦ ವೇಗಕ್ಕೆಟ್ರ್ಯಾಕ್ ಸಿದ್ಧಪಡಿಸಲಾಗುವುದು. ಅಮೃತ ಭಾರತ ಯೋಜನೆಯಡಿ ಈ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಾವೇರಿ ಪ್ರಧಾನ ಅಂಚೆ ಕಚೇರಿ ಅಧೀಕ್ಷಕ ಆರ್.ಅಶೋಕ ಮಾತನಾಡಿ, ಈ ರೈಲು ಆರಂಭದಿoದ ಈ ಭಾಗದ ಜನರಿಗೆ ಹೆಚ್ಚಿನ ಅನೂಕಲವಾಗಲಿದೆ. ಹಾವೇರಿ ಪ್ರಧಾನ ಅಂಚೆ ಕಚೇರಿಯಲ್ಲಿ ರೈಲ್ವೆ ಪ್ರಯಾಣದ ಮುಂಗಡ ಟಿಕೇಟ್ ಕಾಯ್ದಿರಿಸಬಹುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹಾವೇರಿ ವಾಣಿಜ್ಯೋದ್ಯಮ ಸಂಘದ ಉಪಾಧ್ಯಕ್ಷ ನಾಗರಾಜ ರೋಣದ ಮಾತನಾಡಿ, ವಂದೇ ಭಾರತ್ ರೈಲು ಸಂಚಾರ ಆರಂಭಿಸಿದ್ದು ಬಹಳ ಸಂತಸದ ಸಂಗತಿಯಾಗಿದೆ. ಹಾವೇರಿ ರೈಲು ನಿಲ್ದಾಣದಲ್ಲಿ ಈ ರೈಲು ನಿಲುಗಡೆ ಕ್ರಮವಹಿಸಬೇಕು ಎಂದು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಎಲ್‌ಐಸಿ ಹಿರಿಯ ವ್ಯವಸ್ಥಾಪಕರಾದ ರಚನಾ, ಅಂಚೆ ಕಚೇರಿ ಹೆಡ್ ಮಾಸ್ಟರ್ ಮಂಜುನಾಥ ಕಳಸೂರ, ಹಿರಿಯ ವರ್ತಕ ಚನ್ನಬಸಪ್ಪ, ರೈಲ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ದಾವಣಗೆರೆ ವಿಭಾಗದ ಸಹಾಯಕ ವ್ಯವಸ್ಥಾಪಕ ಪ್ರಶಾಂತ ಸ್ವಾಗತಿಸಿದರು.
ರೈಲು ಆಗಮಿಸುವುದನ್ನೂ ಕಣ್‌ತುಂಬಿಕೊಳ್ಳುವುದಕ್ಕೆ ರೈಲ್ವೆ ನಿಲ್ದಾಣಕ್ಕೆ ಸಾವಿರಾರು ಜನರು ಆಗಮಿಸಿದ್ದರು. ರೈಲು ಆಗಮಿಸುತ್ತಿದ್ದಂತೆ ಸಾರ್ವಜನಿಕರು ಫೋಟೋ, ವಿಡಿಯೋ ಚಿತ್ರಿಕರಣದಲ್ಲಿ ತೊಡಗಿದ್ದು ಕಂಡುಬoದಿತು. ಅನೇಕರು ಸೆಲ್ಫಿ ಕ್ಲಿಕ್ಕಿಸಿಕೊಂಡು ಅಪ್‌ಲೋಡ್ ಮಾಡಿ ಹರ್ಷಪಡುತ್ತಿರುವುದು ಸಾಮಾನ್ಯ ದೃಶ್ಯವಾಗಿತ್ತು. ಈ ರೈಲಿನ ಪ್ರಯೋಜನ ಹಾವೇರಿ ಜನತೆಗೂ ದೊರೆಯುವಂತಾಗಲು ಈ ನಿಲ್ದಾಣದಲ್ಲಿಯೂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ನಿಲ್ಲುವಂತಾಗಬೇಕು ಎನ್ನುವುದು ಹಾವೇರಿ ಜನತೆಯ ಬಯಕೆ ಎನ್ನುವುದು ಜನತೆಯ ಮಾತುಗಳಲ್ಲಿ ಕಂಡುಬoದಿತು.