ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮೂಲಕ ಎಲ್ಲರ ಮನೆಮಾತಾಗಿದ್ದ ವರ್ತೂರು ಸಂತೋಷ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿದ್ದಾಗ ವರ್ತೂರು ಹುಲಿ ಉಗುರಿನ ಪೆಂಡೆಂಟ್ ಹಾಕಿದ್ದಾರೆ ಎಂದು ಠಾಣೆಯಲ್ಲಿ ದೂರು ದಾಖಲಾಗಿದ್ದು, ವರ್ತೂರ್ ವಿಚಾರಣೆ ಎದುರಿಸಿದ್ದರು. ಇದೀಗ ಪ್ರಾಣಿಗಳಿಗೆ ಸಂಬಂಧಿಸಿದ ಮತ್ತೊಂದು ವಿಷಯದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ವರ್ತೂರು ಸಂತೋಷ್ ಹಳ್ಳಿಕಾರ್ ರೇಸ್ಗೆ ಸಿದ್ಧತೆ ನಡೆಸಿದ್ದಾರೆ. ಇದು ಇರುವಾಗಲೇ ಹಳ್ಳಿಕಾರ್ ಹಸುಗಳನ್ನ ವಾಹನದಲ್ಲಿ ಸಾಗಾಣಿಕೆ ಮಾಡುವಾಗ ರೂಲ್ಸ್ ಬ್ರೇಕ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಒಂದೇ ಒಂದು ಟ್ರಕ್ನಲ್ಲಿ ಬರೋಬ್ಬರಿ 9 ಹೋರಿಗಳನ್ನು ಹಾಗೂ ಇತರೆ ಸಂಬಂಧಿಸಿದ ವಸ್ತುಗಳನ್ನಿಟ್ಟು ಫಾರ್ಮ್ ಹೌಸ್ನಿಂದ ಸಾಗಾಟ ಮಾಡಿರುವ ಆರೋಪ ಇದೆ. ಇದು ಪ್ರಾಣಿ ಹಿಂಸೆ, ಪ್ರಾಣಿಗಳ ಸಾಗಾಟ ನಿಯಮವನ್ನು ಉಲ್ಲಂಘಿಸದಂತೆ ಆಗುತ್ತದೆ. ಇದೇ ಸಂಬಂಧ ಠಾಣೆಗೆ ದೂರು ನೀಡಲಾಗಿದೆ.
SPCA ಪ್ರಾಣಿ ಕಲ್ಯಾಣ ಅಧಿಕಾರಿ ಹರೀಶ್ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವರ್ತೂರು ಸಂತೋಷ್ ಅವರು ಒಂದು ಸುತ್ತಿನ ವಿಚಾರಣೆ ಮುಗಿಸಿದ್ದಾರೆ. ಕೇವಲ ಎನ್ಸಿಆರ್ ಮಾಡಿ ಪ್ರಕರಣ ಮುಚ್ಚಿ ಹಾಕುವುದ ಬೇಡ. ಎಫ್ಐಆರ್ ದಾಖಲು ಮಾಡಿ ಕೋರ್ಟ್ ಮೆಟ್ಟಿಲೇರಲು ದೂರುದಾರ ಹರೀಶ್ ಅವರು ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ಎಫ್ಐಆರ್ ದಾಖಲಾದರೆ ವರ್ತೂರು ಸಂತೋಷ್ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.