ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬೆಳ್ತಂಗಡಿ ತಾಲೂಕಿನ ಕೆಲವೆಡೆಗಳಲ್ಲಿ ಮಂಗಳವಾರ ಮುಂಜಾನೆ ಬಿರು ಬಿಸಿಲು ಕಾಣಿಸಿ ಮಧ್ಯಾಹ್ನ ಬಳಿಕ ಮೋಡ ಕವಿದ ವಾತಾವರಣ ಗೋಚರಿಸಿ ಸಂಜೆಯಾಗುತ್ತಿದ್ದಂತೆ ಸುಳ್ಯ ಪಟ್ಟಣ ಸೇರಿದಂತೆ ಕೆಲವೆಡೆಗಳಲ್ಲಿ ಮಳೆಯಾಗಿದೆ.
ಈ ಬಾರಿ ಜನವರಿ ತಿಂಗಳಿನಲ್ಲಿ ಮಳೆ ಸುರಿಯುತ್ತಿದ್ದು ಅಡಿಕೆ , ಕಾಫಿ , ಕೊಕ್ಕೊ, ಕಾಳುಮೆಣಸು ಸೇರಿದಂತೆ ಇತರೆ ಕೃಷಿಗಳ ಫಸಲು ಒಣ ಹಾಕಿದ್ದು ಮಂಗಳವಾರ ಸುರಿದ ಅಕಾಲಿಕ ಮಳೆಗೆ ಒಣ ಹಾಕಲಾಗಿದ್ದ ಬೆಳೆಗಳು ಒದ್ದೆಯಾದವು.
ಬೆಳ್ತಂಗಡಿಯಲ್ಲೂ ಮಳೆ
ಬೆಳ್ತಂಗಡಿ ತಾಲೂಕಿನ ದಿಡುಪೆ ಕಿಲ್ಲೂರು,ಕೊಲ್ಲಿ, ಮಲವಂತಿಗೆ ಮಿತ್ತಬಾಗಿಲು, ಕಡಿರುದ್ಯಾವರ,ಹೇಡ್ಯ, ಕಕ್ಕಿಂಜೆ,ಚಾರ್ಮಾಡಿ, ನೆರಿಯ ಮೊದಲಾದ ಪರಿಸರದ ಹಲವೆಡೆ ಮಂಗಳವಾರ ಸಂಜೆ ಉತ್ತಮ ಮಳೆ ಸುರಿದಿದೆ.
ಇತ್ತ ಕೆಲ ದಿನಗಳ ಚಳಿಯು ದೂರವಾಗಿದ್ದು ಹವಾಮಾನ ವೈಪರೀತ್ಯ ಹಿನ್ನಲೆಯಲ್ಲಿ ಇದೀಗ ಜನವರಿಯಲ್ಲು ಮಳೆ ಸುರಿದಿದ್ದು ನೀರಿನ ಕೊರತೆ ಉಂಟಾಗದಿದ್ದರು , ಕೃಷಿಕರ ಪಾಡು ಹೇಳ ತೀರದಾಗಿದೆ.


