ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರವೂ ಭಾರೀ ಮಳೆ ಮುಂದುವರಿದಿದೆ. ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಲ್ಲಿ ಸದ್ಯ ಸಾಂತ್ವನ ಕೇಂದ್ರ ಸ್ಥಾಪಿಸಲಾಗಿದ್ದು, ಒಂದು ಕೇಂದ್ರ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ.
ಮಂಗಳೂರು ನಗರಕ್ಕೆ ನೀರುಣಿಸುವ ಬಂಟ್ವಾಳ ತಾಲೂಕಿನ ತುಂಬೆ ವೆಂಟೆಡ್ ಅಣೆಕಟ್ಟೆಯ ನೀರಿನ ಮಟ್ಟ 4.50 ಮೀಟರ್‌ಗೆ ಏರಿಕೆಯಾಗಿದೆ. ಜೀವನದಿಗಳಾದ ನೇತ್ರಾವತಿ, ಕುಮಾರಧಾರಾ ನದಿಗಳು ತುಂಬಿ ಹರಿಯುತ್ತಿವೆ. ಮಳೆಯ ಪರಿಣಾಮ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯೂ ಸಂಭವಿಸಿದೆ.
ಏಪ್ರಿಲ್ 1ರಿಂದ ಇದುವರೆಗೆ ಒಟ್ಟು 751 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ 72 ಮನೆಗಳು ಸಂಪೂರ್ಣ ನಾಶವಾಗಿವೆ. ಪ್ರಾಕೃತಿಕ ವಿಕೋಪದಿಂದ ಒಟ್ಟು 5 ಮಂದಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 35 ಜಾನುವಾರು ಪ್ರಾಣಹಾನಿ ಸಂಭವಿಸಿದೆ.
ಭಾರೀ ಮಳೆಯ ಪರಿಣಾಮ ೪.೯೩೪ ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. 4 ಸಾವಿರದ 123 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, 115 ವಿದ್ಯುತ್ ಪರಿವರ್ತಕಗಳು ಹಾನಿಗೀಡಾಗಿವೆ. 19 ಸೇತುವೆಗಳಿಗೆ ಹಾನಿಯಾಗಿದೆ. ೨೦೬.೪೪ ಕಿಲೋಮೀಟರ್ ಉದ್ದದ ರಸ್ತೆಗಳು ಹದಗೆಟ್ಟಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಜನವರಿಯಿಂದ ಜೂನ್ 15ರವರೆಗೆ ಜಿಲೆಯಲ್ಲಿ ಸರಾಸರಿ 596.9 ಮಿಲಿ ಮೀಟರ್ ಮಳೆಯಾಗುತ್ತಿದ್ದು, ಈ ಬಾರಿ 1 ಸಾವಿರದ 414.8ಮಿಲಿಮೀಟರ್ ಮಳೆಯಾಗಿದೆ.