ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರುಣಾರ್ಭಟ: ಶೃಂಗೇರಿ-ಹೊರನಾಡು ರಸ್ತೆ ಸಂಚಾರ ಬಂದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ತುಂಗ, ಹೇಮಾವತಿ ಆರ್ಭಟಕ್ಕೆ ಜನ ಕಂಗಾಲಾಗಿದ್ದಾರೆ. ಸದ್ಯ ಮುಂದುವರೆದ ಭಾರೀ ಮಳೆ‌ ಹಿನ್ನೆಲೆ ಶೃಂಗೇರಿಯಿಂದ ಹೊರನಾಡಿಗೆ ಹೋಗುವ ಮುಖ್ಯ ರಸ್ತೆ ಬಂದ್​ ಆಗಿದೆ. ಸಂಪೂರ್ಣ ರಸ್ತೆ ಸಂಪರ್ಕ ಕಡಿತವಾಗಿದೆ. ಹೀಗಾಗಿ ವಾಹನ ಸವಾರರಿಗೆ ಹಳುವಳ್ಳು ಮಾರ್ಗವಾಗಿ ಸಂಚಾರ ಮಾಡಲು‌ ಸೂಚನೆ ನೀಡಲಾಗಿದೆ.

ಕಳಸ ಪಟ್ಟಣಕ್ಕೆ ಸಂಪರ್ಕಿಸುವ ಮತ್ತೊಂದು ರಸ್ತೆಯೂ ಬಂದ್ ಆಗಿದೆ. ಬಿಳಾಲುಕೊಪ್ಪದಿಂದ ಬಸರೀಕಟ್ಟೆಗೆ ಹೋಗುವ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಶೃಂಗೇರಿಯಿಂದ ಹೊರನಾಡಿಗೆ ಹೋಗುವ ಮುಖ್ಯ ರಸ್ತೆ ಬಂದ್ ಆಗಿದೆ. ಮಧ್ಯಾಹ್ನ ಬಳಿಕ‌ ಕಳಸ‌, ಕುದುರೆಮುಖ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ.

ಅಂಗನವಾಡಿ, ಶಾಲಾ ಕಾಲೇಜುಗಳಿಗೆ ನಾಳೆ ರಜೆ
ಮಲೆನಾಡು ಭಾಗದ 6 ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು ನಗರ, ಅಂಬಳೆ ಹೋಬಳಿ, ಲಕ್ಯಾ ಹೋಬಳಿ ‌ಹೊರತು ಪಡಿಸಿ ಚಿಕ್ಕಮಗಳೂರು, ಮೂಡಿಗೆರೆ, ಕಳಸ,ಶೃಂಗೇರಿ, ಕೊಪ್ಪ, ಎನ್​ಆರ್​ ಪುರ ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಮುಂಜಾಗ್ರತವಾಗಿ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ವರುಣಾರ್ಭಟಕ್ಕೆ ಅಪಾಯದ ಮಟ್ಟ ಮೀರಿ ತುಂಗಾ, ಭದ್ರಾ, ಹೇಮಾವತಿ ನದಿಗಳು ಆರ್ಭಟಿಸುತ್ತಿದೆ. ತುಂಗಾ ನದಿ ಶೃಂಗೇರಿ ಶಾರದಾ ಮಠದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆರೆ ಸೃಷ್ಟಿ ಮಾಡಿದರೆ ಭದ್ರಾ ನದಿ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮೇಲೆ ಹರಿಯುತ್ತಿದ್ದು ಕಳೆದ 12 ಗಂಟೆಯಿಂದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು ಕಳಸ-ಹೊರನಾಡು ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ.

ಒಂದು ಕಡೆ ಮಳೆ ಆರ್ಭಟಿಸಿ ಅವಾಂತರ ಸೃಷ್ಟಿ ಮಾಡಿದ್ರೆ. ಮಳೆಯಿಂದ ಜಲಪಾತಗಳಿಗೆ ಜೀವ ಕಳೆ ಬಂದಿದ್ದು, ಭೋರ್ಗರೆಯುತ್ತಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಹೊನ್ನಮ್ಮನ ಹಳ್ಳ, ಝರಿ ಫಾಲ್ಸ್ ದೃಶ್ಯ ಕಾವ್ಯ ಸೃಷ್ಟಿಸಿದೆ. ಇಂದು ಮತ್ತು ನಾಳೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!