ಹೊಸ ದಿಗಂತ ಡಿಜಿಟಿಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜು.೧೭ರಂದು ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಇನ್ಬಶೇಖರ್ ತಿಳಿಸಿದ್ದಾರೆ.
ಜಿಲ್ಲೆಯ ಶಾಲಾ ಕಾಲೇಜುಗಳು, ವೃತ್ತಿಪರ ಕಾಲೇಜುಗಳು, ಕೇಂದ್ರೀಯ ವಿದ್ಯಾಲಯಗಳು, ಬೋಧನಾ ಕೇಂದ್ರಗಳು, ಮದರಸಾಗಳು, ಅಂಗನವಾಡಿಗಳು ಮತ್ತು ವಿಶೇಷ ತರಗತಿಗಳಿಗೆ ಕೂಡಾ ರಜೆ ಅನ್ವಯಿಸುತ್ತದೆ ಎಂದು ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.
ಆದರೆ ಈ ಹಿಂದೆ ನಿಗದಿಪಡಿಸಲಾದ ಎಲ್ಲಾ ಪರೀಕ್ಷೆಗಳು (ವೃತ್ತಿಪರ, ವಿಶ್ವವಿದ್ಯಾಲಯ ಮತ್ತು ಇತರ ಇಲಾಖೆಗಳ ಪರೀಕ್ಷೆಗಳು ಸೇರಿದಂತೆ) ವೇಳಾಪಟ್ಟಿಯಂತೆ ನಡೆಯಲಿವೆ. ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಈ ನಿಟ್ಟಿನಲ್ಲಿ ಜಲಮೂಲಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಅಲ್ಲದೆ ರಾಷ್ಟ್ರೀಯ ಹೆದ್ಧಾರಿ ಸಹಿತ ವಿವಿಧ ರಸ್ತೆಗಳು ಜಲಾವೃತಗೊಳ್ಳುತ್ತಿದ್ದು ಸಾರಿಗೆ ಸಂಚಾರಕ್ಕೆ ಸಮಸ್ಯೆಯಾಗಿ ಬಾಧಿಸಿದೆ. ಮುಂದಿನ ಕೆಲವು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆ ಸುರಿಯಲಿದೆ. ವಾಯುಭಾರ ಕುಸಿತದಿಂದಾಗಿ ಬಿರುಸಿನ ಮಳೆಯಾಗುತ್ತಿದೆ ಎಂದು ತಿರುವನಂತಪುರದ ಕೇಂದ್ರ ಹವಾಮಾನ ಇಲಾಖೆಯು ತಿಳಿಸಿದೆ.