ಹೊಸದಿಗಂತ ವರದಿ, ಮೈಸೂರು:
ಭೀಕರ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಅರಮನೆ ನಗರಿ ಮೈಸೂರಿಗೆ ವರುಣ ದೇವ ಕೊನೆಗೂ ಎಂಟ್ರಿ ಕೊಟ್ಟಿದ್ದಾನೆ. ಆದರೆ ಆತ ಶಾಂತನಾಗಿ ಬಂದಿಲ್ಲ, ಭಾರೀ ಬಿರುಗಾಳಿಯೊಂದಿಗೆ ಆರ್ಭಟಿಸಿಕೊಂಡು ಬಂದು, ಒಂದು ಗಂಟೆಗೂ ಹೆಚ್ಚು ಕಾಲ ತನ್ನ ರುದ್ರ ಪ್ರತಾಪವನ್ನು ತೋರಿಸಿದ್ದಾನೆ.
ಸಂಜೆ ೪.೪೦೫ ವೇಳೆ ಭಾರೀ ಬಿರುಗಾಳಿಯೊಂದಿಗೆ ಆರಂಭವಾದ ಗುಡುಗು, ಸಿಡಿಲಿನ ಸಹಿತದ ಮಳೆ ಸತತವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು, ಸಿಡಿಲು, ಬಿರುಗಾಳಿಯೊಂದಿಗೆ ಬೊಬ್ಬಿರಿದಿದ್ದಾನೆ. ಮೊದಲ ದಿನವೇ ವರುಣನ ಕೋಪ, ತಾಪ ನೋಟಿ ಮೈಸೂರಿನ ಜನರು ಬೆಚ್ಚಿ ಬಿದ್ದಿದ್ದಾರೆ. ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವೆಡೆ ಮರಗಳು ಧರೆಗುರುಳಿವೆ. ಬಿರುಗಾಳಿ ರಭಸಕ್ಕೆ ಮರ,ರಂಬೆ ಕೊಂಬೆಗಳು ದರೆಗುರುಳಿವೆ. ನಗರದ ಕಾಳಿದಾಸ ರಸ್ತೆಯಲ್ಲಿ ಕಾರುಗಳ ಮೇಲೆ ಮರದ ರಂಬೆಗಳು ಬಿದ್ದು ಹಲವು ಕಾರುಗಳು ಜಖಂ ಆಗಿವೆ. ಸಿದ್ದಾರ್ಥ ನಗರ, ಶ್ರೀರಾಂಪುರ, ಕುರುಬಾರಹಳ್ಳಿ ಗೇಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮರಗಳು ಬುಡಸಮೇತ ಉರುಳಿ ಬಿದ್ದಿವೆ. ಹಲವೆಡೆ ರಸ್ತೆಗಳಿಗೆ ಮರಗಳು ಉರುಳಿ ಬಿದ್ದಿರುವ ಕಾರಣ ಸಂಚಾರ ಅಸ್ತವ್ಯಸ್ತಗೊಂಡಿತು.
ನಗರ ಪಾಲಿಕೆಯ ಸಿಬ್ಬಂದಿಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳ ತೆರವು ಕಾರ್ಯಚರಣೆಯನ್ನು ನಡೆಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕೆಲವಡೆ ವಿದ್ಯುತ್ ಕಂಬಗಳೂ ಉರುಳಿ ಬಿದ್ದಿದ್ದು, ಸೆಸ್ಕಾಂನವರು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, ದುರಸ್ಥಿ ಕಾರ್ಯವನ್ನು ನಡೆಸಿದರು.
ಇನ್ನು ಹಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಮೈಸೂರಿಗರು ಇದೀಗ ಮಳೆರಾಯನ ಆಗಮನಕ್ಕೆ ಸಂತಸಗೊoಡಿದ್ದಾರೆ. ಮಳೆಯಾದ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಸೂರ್ಯ ದೇವನ ಕಡು ಬಿಸಿಲಿಗೆ ಕಾದ ಕಾವಲಿಯಂತಾಗಿದ್ದ ಭುವಿ, ವರುಣ ಸಿಂಚನದಿAದ ಪುಳಕಿತಗೊಂಡು ಸಂಭ್ರಮಪಡುವುದನ್ನ ನೋಡಿ ಸಹಿಸಲಾರದ ವರುಣ (ಬಿರುಗಾಳಿ) ಹೊಟ್ಟೆಕಿಚ್ಚಿನಿಂದ ತನ್ನ ಕಬಂಧ ಬಾಹುಗಳನ್ನು ಚಾಚಿ ಕೆಲ ಮರಗಳ ಕೊಂಬೆ ರಂಬೆಗಳನ್ನು ಮುರಿದೇ ಬಿಟ್ಟು, ಮಾನವರು ಪ್ರಕೃತಿ ಹಾಳು ಮಾಡುತ್ತಿರುವುದಕ್ಕೆ ತನ್ನ ಕೋಪವನ್ನು ತೋರಿಸಿದ್ದಾನೆ.