ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಮಳೆಯಿಂದಾಗಿ ಜಿಲ್ಲೆಯ ಶೃಂಗೇರಿ ತಾಲೂಕಿನ ಹೆಗ್ಗಾರುಕೂಡಿಗೆ ಗ್ರಾಮದ ಬಳಿಯ ಕಳಸ-ಶೃಂಗೇರಿ ಮಾರ್ಗದ ರಸ್ತೆ ಕುಸಿದಿದೆ.
ನಿತ್ಯ ಸಾವಿರಾರು ಪ್ರವಾಸಿಗರು ಸಂಚಾರ ಮಾಡುವ ಮತ್ತು 15 ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯೇ ಕುಸಿದಿದ್ದು, ಜನರು ಪರದಾಡುವಂತಾಗಿದೆ.
ಕಳೆದ ವರ್ಷ ಸುರಿದ ಮಳೆಗೆ ಸ್ವಲ್ಪ ಕುಸಿತವಾಗಿದ್ದ ರಸ್ತೆ ಇದೀಗ ಮತ್ತೆ ಕುಸಿತವಾಗಿದೆ. ರಸ್ತೆ ಕುಸಿತವಾದ ಸ್ಥಳಕ್ಕೆ ಸಚಿವ ಕೆ.ಜೆ ಜಾರ್ಜ್ ಭೇಟಿ ನೀಡಿ ಮಳೆಯಿಂದ ಹಾನಿಯಾದ ರಸ್ತೆ ವೀಕ್ಷಣೆ ಮಾಡಿದ್ದಾರೆ. ಶೃಂಗೇರಿ, ಕಳಸ, ಕೊಪ್ಪ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಮಳೆ ಅವಾಂತರದಿಂದಾಗಿ ಶೃಂಗೇರಿ ದೇಗುಲ ಬಳಿಯ ಗಾಂಧಿ ಮೈದಾನ ಸಂಪೂರ್ಣ ಜಲಾವೃತವಾಗಿದೆ. ಅದೇ ರೀತಿಯಾಗಿ ಪ್ಯಾರ್ಲರ್ ರಸ್ತೆ, ಕರುಬಕೇರಿ ರಸ್ತೆಯೂ ಮುಳುಗಡೆಯಾಗಿದ್ದು, ಅಂಗಡಿಗಳಿಗೆ ನದಿ ನೀರು ನುಗ್ಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಅಂಗಡಿಗಳನ್ನು ತಾಲೂಕು ಆಡಳಿತ ತೆರವುಗೊಳಿಸಿದೆ. ದೇವಾಲಯದ ಸುತ್ತಮುತ್ತಲಿನ ಇನ್ನಷ್ಟು ಪ್ರದೇಶಗಳು ಮುಳುಗಡೆ ಆತಂಕ ಎದುರಾಗಿದೆ.