ರಾಜ್ಯಾದ್ಯಾಂತ ವರುಣನ ಆರ್ಭಟ: ಸಿಡಿಲಿಗೆ 7 ಮಂದಿ ಬಲಿ , 4 ದಿನ ‘ಯೆಲ್ಲೋ ಅಲರ್ಟ್’

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಮಳೆಯಾಗಿದೆ. ಬಿರುಗಾಳಿ ಮತ್ತು ಗುಡುಗು ಸಹಿತ ಮಳೆಗೆ ರಾಜ್ಯ ಹೈರಾಣಾಗಿದ್ದು, ಒಂದೇ ದಿನದಲ್ಲಿ ಸಿಡಿಲಿಗೆ ಏಳು ಮಂದಿ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಮಂಗಳವಾರ ಸಿಡಿಲಾಘಾತಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ಕುಟುಂಬದ ಇಬ್ಬರು, ಕೊಪ್ಪಳ ಮತ್ತು ಹಾವೇರಿ ಜಿಲ್ಲೆಯಲ್ಲಿ ತಲಾ ಇಬ್ಬರು ಹಾಗೂ ವಿಜಯಪುರ ಜಿಲ್ಲೆಯ ಒಬ್ಬರು ಸೇರಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.

ಬಳ್ಳಾರಿ ಜಿಲ್ಲೆಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಜಮೀನಿನ ಕೆಲಸದಲ್ಲಿ ತೊಡಗಿದ್ದ ಬೀರಪ್ಪ (45) ಹಾಗೂ ಅವರ ಅಣ್ಣನ ಮಗ ಸುನೀಲ (26) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ಬಸನಗೌಡ (40) ಹಾಗೂ ಕನಕಗಿರಿ ತಾಲೂಕಿನ ಹುಲಿಹೈದರ್‌ ಗ್ರಾಮದ ಯಂಕಪ್ಪ ಜಾಡಿ (45) ಮೃತರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಮಲ್ಲಪ್ಪ ಗುರಶಾಂತಪ್ಪ ತಾಳಿಕೋಟಿ (47) ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ವರದಿಯಾಗಿದೆ.

ಹಾವೇರಿಯಲ್ಲೂ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ. ಹೊಲದ ಕೆಲಸಕ್ಕೆ ಹೋಗಿ ಮನೆಗೆ ಬರುತ್ತಿರುವ ಸಂದರ್ಭದಲ್ಲಿ ಸಿಡಿಲು ಬಡಿದು 29 ವರ್ಷದ ಯುವ ರೈತ ಸುನೀಲ ಸುರೇಶಪ್ಪ ಕಾಳೇರ ಸಾವನಪ್ಪಿದ ಘಟನೆ ರಟ್ಟೀಹಳ್ಳಿ ತಾಲೂಕಿನ ಕುಡಪಲಿ ಗ್ರಾಮದಲ್ಲಿ ನಡೆದಿದೆ.

ಶನಿವಾರದವರೆಗೂ ರಾಜ್ಯದ ಎಲ್ಲ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದ್ದು, ಭಾರಿ ಗಾಳಿ ಸಹಿತ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. 20ರವರೆಗೂ ಮಳೆ ಮುಂದುವರಿಯುವ ಬಗ್ಗೆ ಇಲಾಖೆ ಮುನ್ಸೂಚನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!