ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ಬಳಿಕ ಧಾರಾಕಾರ ಮಳೆ ಸುರಿಯುತ್ತಿದ್ದು, ಇನ್ನು ಮುಂದಿನ ನಾಲ್ಕೈದು ದಿನ ಮಳೆ ಇದೇ ರೀತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ 2-3 ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ ಇತ್ತು. ಆಗೊಮ್ಮೆ ಈಗೊಮ್ಮೆ ಜಿಟಿ ಜಿಟಿ ಮಳೆಯಾಗುತ್ತಿತ್ತು. ಆದರೆ, ಸೋಮವಾರ ಸಂಜೆ 4 ಗಂಟೆಯ ಬಳಿಕ ಮಳೆ ಅಬ್ಬರ ಆರಂಭಿಸಿತು. ಸತತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ರಸ್ತೆಗಳಲ್ಲಿ ನೀರು ನಿಂತಿವೆ.
ಸಂಜೆ ಏಕಾಏಕಿ ಆರಂಭವಾದ ಮಳೆಯಿಂದ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದರು.
ಬೆಂಗಳೂರಿನ ಕೇಂದ್ರ ಭಾಗಗಳಾದ ಮೆಜೆಸ್ಟಿಕ್, ಗಾಂಧಿನಗರ, ಕಬ್ಬನ್ ಪಾರ್ಕ್, ಶಿವಾಜಿನಗರ, ಮಲ್ಲೇಶ್ವರ, ರಾಜಾಜಿನಗರ, ಎಂಜಿ ರಸ್ತೆ, ಹಲಸೂರು, ಇಂದರಾನಗರ, ವಿಮಾನ ನಿಲ್ದಾಣ ರಸ್ತೆ, ಹೆಬ್ಬಾಳ, ಯಶವಂತಪುರ, ಗುರುಗುಂಟೆಪಾಳ್ಯ, ಬಿಇಎಲ್, ಬಸವನಗುಡಿ, ಬನಶಂಕರಿ, ಮೈಸೂರು ರಸ್ತೆ, ಜಯನಗರ, ಜೆಪಿ ನಗರ, ಕನಕಪುರ ರಸ್ತೆ ಸೇರಿದಂತೆ ಹಲವೆಡೆ ಮಳೆ ಜೋರು ಸುರಿದಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರದತ್ತ ತೆರಳುವ ಎಲಿವೇಟೆಡ್ ಕಾರಿಡಾರ್ ರಸ್ತೆಯಲ್ಲಿ ಸಾಕಷ್ಟು ನೀರು ನಿಂತಿದೆ. ಕೋಡಿಗೆಹಳ್ಳಿ ಗೇಟ್ ಸಮೀಪ ನೀರು ಹೆಚ್ಚಿದ್ದು, ಹೆಬ್ಬಾಳ ಕಡೆ ತೆರಳುವವರಿಗೆ ಬೆಂಗಳೂರು ಸಂಚಾರಿ ಪೊಲೀಸ್ ಬದಲಿ ರಸ್ತೆ ಅಥವಾ ಸರ್ವೀಸ್ ರಸ್ತೆ ಬಳಸುವಂತೆ ಮನವಿ ಮಾಡಿದ್ದಾರೆ.