ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದಾದ್ಯಂತ (North India) ವರುಣನ ಅಬ್ಬರ ಜೋರಾಗುತ್ತಿದ್ದು, ಭೂಕುಸಿತ (LandSlide) ಮತ್ತು ಸಾವು ನೋವುಗಳು ಸಂಭವಿಸಿವೆ.
ಮುಂದಿನ ದಿನ ಕೂಡ ದೇಶದ 23 ರಾಜ್ಯಗಳಲ್ಲಿ ಭಾರೀ, ಅತಿ ಭಾರೀ ಮತ್ತು ಅತ್ಯಂತ ಭಾರೀ ಮಳೆಯಾಗುವ ಮುನ್ಸೂಚನೆ ಭಾರತದ ಹವಾಮಾನ ಇಲಾಖೆ (IMD) ನೀಡಿದೆ.
ಉತ್ತರಾಖಂಡದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಹರ್ಯಾಣ ಮತ್ತು ಪಂಜಾಬ್‌ನಲ್ಲಿ, ಮೂರು ದಿನಗಳ ಭಾರೀ ಮಳೆಯ ನಂತರ, ಹಾನಿಯ ಅಂದಾಜು ಮಾಡಲು ಮತ್ತು ಸ್ಥಳಾಂತರಗೊಂಡವರಿಗೆ ಆಹಾರ, ನೀರು ಮತ್ತು ಆಶ್ರಯವನ್ನು ಒದಗಿಸಲು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.
ಮಳೆಯ ನಂತರ ಪಂಜಾಬ್‌ನ ಡೇರಾ ಬಸ್ಸಿಯ ಖಾಸಗಿ ವಸತಿ ಕಾಲೋನಿಯಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಮಟ್ಟ ಎಷ್ಟು ಹೆಚ್ಚಾಯಿತು ಎಂದರೆ ಮನೆಗಳಲ್ಲಿ ಸಿಲುಕಿರುವ ಸ್ಥಳೀಯರನ್ನು ರಕ್ಷಿಸಲು ದೋಣಿಗಳು ಮತ್ತು ಟ್ರ್ಯಾಕ್ಟರ್‌ಗಳನ್ನು ಬಳಸಬೇಕಾಯಿತು. ಉತ್ತರ ಭಾರತದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ 30 ಜನರು ಸಾವಿಗೀಡಾಗಿದ್ದು, ₹ 3,000 ಕೋಟಿ ಮೌಲ್ಯದ ಹಾನಿ ಸಂಭವಿಸಿದೆ. ರಾಜ್ಯದ ರಾಜಧಾನಿ ಶಿಮ್ಲಾದಲ್ಲಿ ಅತಿ ಹೆಚ್ಚು ಸಾವು ನೋವುಗಳು ಸಂಭವಿಸಿದ್ದು, 11 ಮಂದಿ ಸಾವನ್ನಪ್ಪಿದ್ದಾರೆ. ಪೊಲೀಸರ ಪ್ರಕಾರ, ಸಾವಿಗೀಡಾದ 30 ಮಂದಿಯಲ್ಲಿ 29 ಮಂದಿಯನ್ನು ಗುರುತಿಸಲಾಗಿದೆ.
ಜಮ್ಮುವಿನಲ್ಲಿ ರಾಮಬಾನ್ ವಿಭಾಗದಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಗೆ ಹಾನಿಯಾದ ಕಾರಣ ಸತತ ನಾಲ್ಕನೇ ದಿನಕ್ಕೆ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿ ಹೆದ್ದಾರಿಯನ್ನು ಮುಚ್ಚಲಾಗಿದೆ. ಇದರಿಂದಾಗಿ 15,000 ಯಾತ್ರಾರ್ಥಿಗಳು ಜಮ್ಮು ಮತ್ತು ಇತರ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದಾರೆ.