ಭಾರತದಲ್ಲಿ ಹತ್ತರಲ್ಲಿ ಒಬ್ಬರು ವಾಸ್ತು ಶಾಸ್ತ್ರದ ಆಧಾರದ ಮೇಲೆ ಮನೆ ನಿರ್ಮಾಣ ಮಾಡುತ್ತಾರೆ. ನಂಬಿಕೆಯಂತೆ, ಮನೆಯಲ್ಲಿ ಸರಿಯಾದ ಜಾಗದಲ್ಲಿ ದೇವರ ಪ್ರತಿಷ್ಠಾಪನೆ ಮಾಡಿದರೆ ಅದು ಕುಟುಂಬದ ಸುಖ, ಶಾಂತಿ ಹಾಗೂ ಐಶ್ವರ್ಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಗಣೇಶನ ಮೂರ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ, ಅದೃಷ್ಟವರ್ಧನೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅದೇ ರೀತಿ ತಪ್ಪಾದ ದಿಕ್ಕಿನಲ್ಲಿ ಇಟ್ಟರೆ ದೋಷ ಉಂಟಾಗಬಹುದು ಎಂಬ ನಂಬಿಕೆಯೂ ಇದೆ.
ವಾಸ್ತು ತಜ್ಞರ ಸಲಹೆಯಂತೆ, ಮನೆಯ ಪೂಜಾ ಕೋಣೆಯಲ್ಲಿ ಅಥವಾ ಈಶಾನ್ಯ ದಿಕ್ಕಿನಲ್ಲಿ ಗಣೇಶನ ಮೂರ್ತಿಯನ್ನು ಇರಿಸುವುದು ಉತ್ತಮ. ಈಶಾನ್ಯ ದಿಕ್ಕು ಧರ್ಮ, ಜ್ಞಾನ ಮತ್ತು ಬೆಳವಣಿಗೆಯ ಸಂಕೇತವಾಗಿದೆ. ಪೂರ್ವ ಅಥವಾ ಪಶ್ಚಿಮ ದಿಕ್ಕು ಕೂಡ ಗಣಪತಿಯ ಪ್ರತಿಷ್ಠಾಪನೆಗೆ ಅನುಕೂಲಕರ. ಆದರೆ, ದಕ್ಷಿಣ ದಿಕ್ಕಿನಲ್ಲಿ ಗಣೇಶನ ವಿಗ್ರಹವನ್ನು ಇರಿಸುವುದು ವಾಸ್ತು ನಿಯಮಗಳಿಗೆ ವಿರುದ್ಧ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.
ಮನೆಯಲ್ಲಿಯ ಆರ್ಥಿಕ ಸಮಸ್ಯೆ ನಿವಾರಣೆಗಾಗಿ ಬಿಳಿ ಬಣ್ಣದ ಗಣೇಶನ ಮೂರ್ತಿಯನ್ನು ಹಣ ಇಡುವ ಜಾಗದಲ್ಲಿ ಇಡಬೇಕು. ಮಕ್ಕಳ ಅಧ್ಯಯನದಲ್ಲಿ ಉತ್ತೇಜನ ಬೇಕಾದರೆ, ಹಳದಿ ಅಥವಾ ತಿಳಿ ಹಸಿರು ಬಣ್ಣದ ಗಣಪತಿ ಮೂರ್ತಿಯನ್ನು ಸ್ಟಡಿ ರೂಮಿನಲ್ಲಿ ಇಡುವುದು ಒಳ್ಳೆಯದು. ಪೂಜಾ ಕೋಣೆಯಲ್ಲಿದ್ದ ಗಣಪತಿ ಮೂರ್ತಿ ಹಳದಿ ಬಣ್ಣದ್ದಾಗಿರಬೇಕು.
ಗಣೇಶನ ವಿಗ್ರಹದ ಮುಖ ಯಾವ ದಿಕ್ಕಿಗೆ ಇರಬೇಕು ಎಂಬ ಪ್ರಶ್ನೆಗೂ ಸ್ಪಷ್ಟ ಉತ್ತರವಿದೆ. ಮನೆ ಒಳಗಿರುವ ದಿಕ್ಕಿನಲ್ಲಿ, ವಿಶೇಷವಾಗಿ ಈಶಾನ್ಯ ಅಥವಾ ಪೂರ್ವ ದಿಕ್ಕಿಗೆ ಮುಖಮಾಡಿ ಇರಬೇಕು. ಮನೆಯ ಮುಖ್ಯ ಬಾಗಿಲು ಪ್ರದೇಶದಲ್ಲಿ ಒಳಗೆ ಮುಖಮಾಡಿದ ಗಣೇಶನ ಪ್ರತಿಮೆಯನ್ನು ಇಡುವುದರಿಂದ ಒಳಗೆ ಶಕ್ತಿ ಹರಿದು ಬರುವಂತೆ ಮಾಡಬಹುದು.
ಮನೆಯಲ್ಲೊಂದು ಮಾತ್ರ ಗಣೇಶನ ವಿಗ್ರಹ ಇರಬೇಕು – ಏಕಾಗ್ರತೆ ಮತ್ತು ಶಕ್ತಿಯ ಕೇಂದ್ರೀಕರಣಕ್ಕಾಗಿ.
ಗಣಪತಿಯ ಸೊಂಡಿಲು ಎಡಬದಿಗೆ ಇರಬೇಕು, ಏಕೆಂದರೆ ಇದು ಶಾಂತಿ ಮತ್ತು ಸೌಭಾಗ್ಯದ ಸಂಕೇತ.
ಗಣಪತಿಯ ಎತ್ತರ ಹನ್ನೆರಡು ಇಂಚುಗಳೊಳಗೇ ಇರಬೇಕು, ಇದು ಗೃಹದ ಶಕ್ತಿಯ ಸಮತೋಲನವನ್ನು ಕಾಪಾಡಲು ಸಹಾಯಕ.
ಈ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿದರೆ, ವಾಸ್ತು ದೋಷ ನಿವಾರಣೆಗೂ, ಮನಸ್ಸಿಗೆ ಶಾಂತಿಯೂ ಒದಗುತ್ತದೆ ಎಂಬ ನಂಬಿಕೆ ಇದೆ.