ಭಾರತೀಯರು ಚಿನ್ನವನ್ನು ಶ್ರೀಮಂತಿಕೆಯ, ದೈವಿಕ ಶಕ್ತಿಯ ಸಂಕೇತ ಎಂದು ನಂಬುತ್ತಾರೆ. ಸಂಪ್ರದಾಯಕ್ಕೆ ತಕ್ಕಂತೆ ವಿಶೇಷ ದಿನಗಳಲ್ಲಿ, ವಿಶೇಷವಾಗಿ ಅಕ್ಷಯ ತೃತೀಯ, ದೀಪಾವಳಿ ಹಬ್ಬಗಳಲ್ಲಿ ಚಿನ್ನ ಖರೀದಿಯನ್ನು ಶುಭವೆಂದು ನಂಬಲಾಗುತ್ತದೆ. ಆದರೆ ವರ್ಷಪೂರ್ತಿ ಹಬ್ಬಗಳಿಲ್ಲದ ವೇಳೆಯಲ್ಲೂ, ವಾರದ ಯಾವ ದಿನ ಚಿನ್ನ ಖರೀದಿಸಬೇಕು ಎಂಬ ಪ್ರಶ್ನೆ ಹಲವರಿಗಿದೆ. ಜ್ಯೋತಿಷ ಶಾಸ್ತ್ರದ ಪ್ರಕಾರ, ವಾರದ ಕೆಲ ದಿನಗಳಲ್ಲಿ ಬಂಗಾರ ಖರೀದಿಸುವುದರಿಂದ ಒಳ್ಳೆಯದಾಗುತ್ತದೆ, ಎನ್ನುವುದನ್ನು ನೋಡೋಣ.
ಶಾಸ್ತ್ರಗಳ ಪ್ರಕಾರ ಗುರುವಾರ ಹಾಗೂ ಭಾನುವಾರಗಳು ಚಿನ್ನ ಖರೀದಿಗೆ ಅತ್ಯಂತ ಶ್ರೇಷ್ಠ ದಿನಗಳೆಂದು ನಂಬಲಾಗುತ್ತದೆ. ಚಿನ್ನವನ್ನು ಸೂರ್ಯ ಮತ್ತು ಗುರು ಗ್ರಹಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ಬಂಗಾರ ಖರೀದಿಸಿದರೆ, ಸೂರ್ಯ ಹಾಗೂ ಗುರು ಗ್ರಹಗಳ ಸ್ಥಾನ ಬಲಿಷ್ಠವಾಗುತ್ತವೆ ಎಂಬ ನಂಬಿಕೆ ಇದೆ. ಇದರ ಪರಿಣಾಮವಾಗಿ ಮನೆಗೆ ಶಾಂತಿ, ಸಮೃದ್ಧಿ ಹಾಗೂ ಭಾಗ್ಯವೂ ನೆಲೆಸುತ್ತದೆ ಎನ್ನಲಾಗುತ್ತದೆ.
ಅದೇ ರೀತಿ, ಪುಷ್ಯ ನಕ್ಷತ್ರವು ಬಂಗಾರ ಖರೀದಿಗೆ ಅತ್ಯಂತ ಪವಿತ್ರವಾದ ಸಮಯವೆಂದು ಪರಿಗಣಿಸಲಾಗಿದೆ. ಈ ನಕ್ಷತ್ರದ ದಿನ ಚಿನ್ನ ಖರೀದಿಸಿದರೆ ಲಕ್ಷ್ಮೀ ದೇವಿಯ ಅನುಗ್ರಹ ಸಿಗುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ.
ಇನ್ನು ಯಾವ ದಿನ ಚಿನ್ನ ಖರೀದಿಸಬಾರದು ಎಂಬ ಪ್ರಶ್ನೆ ಬರುತ್ತದೆ. ಶಾಸ್ತ್ರದ ಪ್ರಕಾರ ಶನಿವಾರದಂದು ಚಿನ್ನ ಖರೀದಿಸುವುದು ಅಶುಭ. ಶನಿ ದೇವರಿಗೆ ಸಮರ್ಪಿತ ದಿನವಾದ ಶನಿವಾರ ಮತ್ತು ಚಿನ್ನದ ಸಂಕೇತ ಸೂರ್ಯನ ನಡುವೆ ದ್ವೇಷ ಭಾವನೆ ಇದೆ ಎಂದು ನಂಬಲಾಗಿದೆ. ಈ ಕಾರಣದಿಂದ ಶನಿವಾರ ಚಿನ್ನ ಖರೀದಿಸಿದರೆ ಅದು ಆರ್ಥಿಕ ಹಿನ್ನಡೆಗೆ ಕಾರಣವಾಗಬಹುದು, ಕುಟುಂಬದಲ್ಲಿ ಬಡತನ ಮನೆಮಾಡಬಹುದು ಎಂಬ ನಂಬಿಕೆಯೂ ಇದೆ.
ಹಬ್ಬಗಳಿಗಿಂತಲೂ, ವಾರದ ದಿನ ಮತ್ತು ನಕ್ಷತ್ರದ ಸಮಯವನ್ನು ಗಮನದಲ್ಲಿಟ್ಟುಕೊಂಡು ಚಿನ್ನ ಖರೀದಿಸಿದರೆ ಶುಭ ಫಲ ಸಿಗುತ್ತದೆ ಎಂಬ ನಂಬಿಕೆ ಹಲವಾರು ಜನರಲ್ಲಿ ಇದೆ. ಇದನ್ನು ಪಾಲಿಸುವುದು ನಿಮ್ಮ ವೈಯಕ್ತಿಕ ನಂಬಿಕೆಯನ್ನು ಅವಲಂಬಿಸಿದೆ.